ವಿರಾಟ್ ಕೊಹ್ಲಿ ಪಾಲುದಾರಿಕೆಯ ‘one8 Commune’ ರೆಸ್ಟೋರೆಂಟ್ ಶಟ್ ಡೌನ್

BeFunky collage (96)

ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರ ಪಾಲುದಾರಿಕೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಅದ್ದೂರಿಯಾಗಿ ಆರಂಭವಾಗಿದ್ದ ‘ಒನ್8 ಕಮ್ಯೂನ್’ (one8 Commune) ರೆಸ್ಟೋರೆಂಟ್ ಈಗ ಬಾಗಿಲು ಮುಚ್ಚಿದೆ. ರೆಸ್ಟೋರೆಂಟ್‌ನ ಭವಿಷ್ಯ ಸದ್ಯ ಅತಂತ್ರವಾಗಿದೆ.

ಕಳೆದ ವರ್ಷ ಬಿಬಿಎಂಪಿ (BBMP) ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ರೆಸ್ಟೋರೆಂಟ್‌ಗೆ ನೋಟಿಸ್ ನೀಡಿತ್ತು. ಈ ಘಟನೆಯಿಂದ ಅಸಮಾಧಾನಗೊಂಡ ವಿರಾಟ್ ಕೊಹ್ಲಿ, ತಮ್ಮ ಹೆಸರು ಮತ್ತು ಬ್ರ್ಯಾಂಡ್‌ಗೆ ಮುಜುಗರವಾಗುತ್ತಿದೆ ಎಂದು ರೆಸ್ಟೋರೆಂಟ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು. ನಂತರ ರೆಸ್ಟೋರೆಂಟ್ ಹೆಸರಿನಿಂದ ‘ಒನ್8’ ಬ್ರ್ಯಾಂಡ್ ಹೆಸರನ್ನು ತೆಗೆದುಹಾಕಲಾಗಿತ್ತು.

ಬ್ರ್ಯಾಂಡ್ ಹೆಸರು ಹೋದ ಬೆನ್ನಲ್ಲೇ ಕುಸಿದ ವ್ಯಾಪಾರ ವಿರಾಟ್ ಕೊಹ್ಲಿ ಅವರ ಜನಪ್ರಿಯ ಬ್ರ್ಯಾಂಡ್ ಹೆಸರು ಹೊರಹೋದ ಬಳಿಕ ರೆಸ್ಟೋರೆಂಟ್‌ನ ವ್ಯಾಪಾರ ತೀವ್ರವಾಗಿ ಕುಸಿಯಿತು. ಗ್ರಾಹಕರು ಕಡಿಮೆಯಾದರು, ಆದಾಯ ಕುಸಿದು ಬಾಡಿಗೆ ಮತ್ತು ನಿರ್ವಹಣಾ ವೆಚ್ಚಗಳನ್ನು ಪಾವತಿಸಲು ಮಾಲೀಕರಿಗೆ ಸಾಧ್ಯವಾಗಲಿಲ್ಲ. ಲಕ್ಷಾಂತರ ರೂಪಾಯಿ ಬಾಡಿಗೆ ಬಾಕಿ ಬಿದ್ದಿದ್ದರಿಂದ ಕಟ್ಟಡದ ಮಾಲೀಕರು ಕೋರ್ಟ್‌ಗೆ ಹೋಗಿ ರೆಸ್ಟೋರೆಂಟ್ ಮುಚ್ಚಿಸಿದ್ದರು.

ಸದ್ಯ ರೆಸ್ಟೋರೆಂಟ್ ಮಾಲೀಕರು ತಡೆಯಾಜ್ಞೆ (Stay Order) ಪಡೆದಿದ್ದರೂ, ಆರ್ಥಿಕ ಮುಗ್ಗಟ್ಟು ಮತ್ತು ಕೆಲಸಗಾರರಿಗೆ ಸಂಬಳ ನೀಡಲು ಸಾಧ್ಯವಾಗದ ಸ್ಥಿತಿಯಿಂದಾಗಿ ರೆಸ್ಟೋರೆಂಟ್ ಅನ್ನು ಪುನರಾರಂಭಿಸಲು ಕಷ್ಟವಾಗುತ್ತಿದೆ. ವಿರಾಟ್ ಕೊಹ್ಲಿ ಅವರ ‘ಒನ್8’ ಬ್ರ್ಯಾಂಡ್ ಈ ರೆಸ್ಟೋರೆಂಟ್‌ಗೆ ದೊಡ್ಡ ಆಕರ್ಷಣೆಯಾಗಿತ್ತು. ಈಗ ಆ ಬ್ರ್ಯಾಂಡ್ ಇಲ್ಲದೆ ಹಣಕಾಸಿನ ಬಲವೂ ಇಲ್ಲದೆ ರೆಸ್ಟೋರೆಂಟ್ ಭವಿಷ್ಯ ಅನಿಶ್ಚಿತವಾಗಿದೆ.

Exit mobile version