ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಆರ್‌ಸಿಬಿ ಫ್ಯಾನ್ಸ್‌ಗೆ ಕಿಂಗ್‌ ಕೊಹ್ಲಿ ಭಾವುಕ ಸಂದೇಶ

Untitled design 2025 09 03t111731.615

2025ರ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಇತಿಹಾಸದಲ್ಲಿ ಕಪ್ಪು ದಿನವಾಗಿ ಉಳಿಯಲಿದೆ. 18 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ ಚಾಂಪಿಯನ್ ಪಟ್ಟವನ್ನು ಗೆದ್ದ ಆರ್‌ಸಿಬಿಯ ಸಂಭ್ರಮಾಚರಣೆಯ ದಿನವೇ ಈ ದುರಂತ ಸಂಭವಿಸಿತ್ತು. ಈ ಘಟನೆಯಲ್ಲಿ 11 ಜನ ಅಭಿಮಾನಿಗಳು ದುರದೃಷ್ಟವಶಾತ್ ಜೀವ ಕಳೆದುಕೊಂಡರು, ಇದು ತಂಡದ ಗೆಲುವಿನ ಸಂತೋಷವನ್ನು ದುಃಖದ ಛಾಯೆಯಲ್ಲಿ ಮುಳುಗಿಸಿತ್ತು. ಈ ಘಟನೆಯ ಮೂರು ತಿಂಗಳ ಬಳಿಕ, ಆರ್‌ಸಿಬಿ ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವೊಂದನ್ನು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ, ಆರ್‌ಸಿಬಿಯ ಅಫಿಶಿಯಲ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ. “ಜೂನ್ 4 ರಂದು, ಆ ದಿನ ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾಗಿತ್ತು. ಆದರೆ ದುರಂತವಾಗಿ ಮಾರ್ಪಟ್ಟಿದೆ,” ಎಂದು ಕೊಹ್ಲಿ ಬರೆದಿದ್ದಾರೆ. ಈ ದುರಂತದಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಮತ್ತು ಗಾಯಗೊಂಡ ಅಭಿಮಾನಿಗಳಿಗಾಗಿ ತಾವು ಯೋಚಿಸುತ್ತಿರುವುದಾಗಿ ಮತ್ತು ಪ್ರಾರ್ಥಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. “ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ,” ಎಂದು ವಿರಾಟ್‌‌ ಕೊಹ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಬಗ್ಗೆ ಆರ್‌ಸಿಬಿ ತಂಡವೂ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಪ್ರಕಟಿಸಿತ್ತು. “ನಮ್ಮ ಹೃದಯಗಳು ಜೂನ್ 4ರಂದು ಒಡೆದವು. ನಾವು ಆರ್‌ಸಿಬಿ ಕುಟುಂಬದ 11 ಜನರನ್ನು ಕಳೆದುಕೊಂಡೆವು. ಅವರು ನಮ್ಮ ಭಾಗವಾಗಿದ್ದರು. ನಮ್ಮ ನಗರ, ನಮ್ಮ ಸಮುದಾಯ ಮತ್ತು ನಮ್ಮ ತಂಡವನ್ನು ವಿಶಿಷ್ಟವಾಗಿಸುವ ಭಾಗವಾಗಿದ್ದರು,” ಎಂದು ಆರ್‌ಸಿಬಿ ತಿಳಿಸಿತ್ತು. ಈ ದುರಂತದಿಂದ ತಾವು ಸಾಕಷ್ಟು ಕಲಿತಿದ್ದೇವೆ ಎಂದು ಹೇಳಿರುವ ಆರ್‌ಸಿಬಿ, ಅಭಿಮಾನಿಗಳಿಗಾಗಿ ‘RCB Cares’ ಎಂಬ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಮೂಲಕ ಅಭಿಮಾನಿಗಳ ಜೊತೆಗೆ ಒಗ್ಗಟ್ಟಾಗಿ ನಿಲ್ಲುವ ಭರವಸೆಯನ್ನು ತಂಡ ನೀಡಿದೆ. “ನಾವು ಸದಾ ನಿಮ್ಮೊಂದಿಗಿದ್ದೇವೆ,” ಎಂದು ಆರ್‌ಸಿಬಿ ತನ್ನ ಪೋಸ್ಟ್‌ನಲ್ಲಿ ಭರವಸೆ ನೀಡಿದೆ.

Exit mobile version