IPL 2026: ರೋಹಿತ್ ಶರ್ಮಾ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ

Untitled design 2026 04 05T221847.109

ಬೆಂಗಳೂರು, ಏಪ್ರಿಲ್ 5: ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 28 ರನ್ ಗಳಿಸಿ ಔಟಾದರೂ, ಅವರು ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಅವರ ದೊಡ್ಡ ಐಪಿಎಲ್ ದಾಖಲೆಯನ್ನು ಮುರಿದಿದ್ದಾರೆ. 

ಭಾನುವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 11ನೇ ಐಪಿಎಲ್ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಆರ್‌‌ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿದರು. ಇಬ್ಬರೂ ಉತ್ತಮ ಆರಂಭ ನೀಡಿ ಮೊದಲ ವಿಕೆಟ್‌ಗೆ 37 ರನ್‌ಗಳ ಜೊತೆಯಾಟವಾಡಿದರು.

ಕೊಹ್ಲಿ ಇನ್ನಿಂಗ್ಸ್

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಕೊಹ್ಲಿ, ಇಲ್ಲಿಯೂ ತಮ್ಮ ಲಯವನ್ನು ಮುಂದುವರಿಸಿದರು. ಅವರು 18 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 28 ರನ್ ಗಳಿಸಿದರು. ನಾಲ್ಕನೇ ಓವರ್‌ನಲ್ಲಿಅಂಶುಲ್ ಕಾಂಬೋಜ್ ಅವರ ಎಸೆತದಲ್ಲಿ ಶಿವಂ ದುಬೆ ಅವರಿಗೆ ಕ್ಯಾಚ್ ನೀಡಿ ಔಟಾದರು. ಇದಕ್ಕೂ ಮುನ್ನ ದುಬೆ ಅವರ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ್ದರು. ಅದು ತಪ್ಪಿದರೆ ಕೊಹ್ಲಿ ಇನ್ನೂ ದೊಡ್ಡ ಮೊತ್ತ ಗಳಿಸುವ ಸಾಧ್ಯತೆಯಿತ್ತು.

ದಾಖಲೆಯ ಸಾಧನೆ

ಕೇವಲ 28 ರನ್‌ಗೆ ಔಟಾದರೂ, ಕೊಹ್ಲಿ ಈ ಪಂದ್ಯದೊಂದಿಗೆ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚೆನ್ನೈ ಸೂಪರ್ ಕಿಂಗ್ಸ್ ಎದುರು ಇದು ಅವರ 36ನೇ ಇನ್ನಿಂಗ್ಸ್ ಆಗಿತ್ತು. ಈ ಇನ್ನಿಂಗ್ಸ್ ಬಳಿಕ ಸಿಎಸ್‌ಕೆ ವಿರುದ್ಧ ಅವರ ಒಟ್ಟು ರನ್‌ಗಳು 1174 ಕ್ಕೆ ತಲುಪಿದವು. ಇದರೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 1161 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು.

ಏಕೈಕ ಐಪಿಎಲ್ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು (ಪಟ್ಟಿ)

ಶ್ರೇಣಿ ಆಟಗಾರ ರನ್‌ಗಳು ಎದುರಾಳಿ ತಂಡ
1 ವಿರಾಟ್ ಕೊಹ್ಲಿ 1174 ಚೆನ್ನೈ ಸೂಪರ್ ಕಿಂಗ್ಸ್
2 ರೋಹಿತ್ ಶರ್ಮಾ 1161 ಕೋಲ್ಕತಾ ನೈಟ್ ರೈಡರ್ಸ್
3 ವಿರಾಟ್ ಕೊಹ್ಲಿ 1159 ಪಂಜಾಬ್ ಕಿಂಗ್ಸ್
4 ಡೇವಿಡ್ ವಾರ್ನರ್ 1134 ಪಂಜಾಬ್ ಕಿಂಗ್ಸ್
5 ವಿರಾಟ್ ಕೊಹ್ಲಿ 1130 ಡೆಲ್ಲಿ ಕ್ಯಾಪಿಟಲ್ಸ್

ಕೊಹ್ಲಿ ಅವರ ಹೆಸರು ಈ ಪಟ್ಟಿಯಲ್ಲಿ ಮೂರು ಬಾರಿ (ಸಿಎಸ್‌ಕೆ, ಪಂಜಾಬ್, ಡೆಲ್ಲಿ) ಬಂದಿದೆ. 

ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್

ಕೊಹ್ಲಿ ಔಟಾದರೂ, ಆರ್‌‌ಸಿಬಿ ತಂಡ ಬಿರುಗಾಳಿಯಂತೆ ಬ್ಯಾಟಿಂಗ್ ಮುಂದುವರಿಸಿತು. ದೇವದತ್ ಪಡಿಕ್ಕಲ್ 28 ಎಸೆತಗಳಲ್ಲಿ 50 ರನ್, ಫಿಲ್ ಸಾಲ್ಟ್ 30 ಎಸೆತಗಳಲ್ಲಿ 46 ರನ್, ರಜತ್ ಪಾಟಿದಾರ್ ಅಜೇಯ 48 ರನ್ (23 ಎಸೆತ), ಮತ್ತು ಟಿಮ್ ಡೇವಿಡ್ 70* ರನ್ (32 ಎಸೆತ) ಸಿಡಿಸಿ ಅಬ್ಬರಿಸಿದರು. ಅಂತಿಮವಾಗಿ ಆರ್‌‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿ ಸಿಎಸ್‌ಕೆಗೆ 251 ರನ್‌ಗಳ ದೈತ್ಯ ಗುರಿ ನೀಡಿತು.

Exit mobile version