ಭಾರತೀಯ ಕ್ರಿಕೆಟ್ ಲೋಕದಲ್ಲಿ ಭರವಸೆಯ ಆಟಗಾರನಾಗಿ ಹೊರಹೊಮ್ಮುತ್ತಿರುವ 14 ವರ್ಷದ ವೈಭವ್ ಸೂರ್ಯವಂಶಿ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗುತ್ತಿರುವುದು ತಮ್ಮ ಬ್ಯಾಟಿಂಗ್‌ನಿಂದಲ್ಲ ಬದಲಾಗಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಕೈಬಿಟ್ಟಿರುವುದರಿಂದ.
ಕ್ರಿಕೆಟ್ ಬದ್ಧತೆ ಮತ್ತು ಪರೀಕ್ಷೆಯ ನಡುವೆ ಆಯ್ಕೆ
ಬಿಹಾರದ ತಾಜ್‌ಪುರದ ನಿವಾಸಿಯಾಗಿರುವ ವೈಭವ್, ಮಾಡೆಸ್ಟ್ರಿ ಸ್ಕೂಲ್‌ನ ವಿದ್ಯಾರ್ಥಿ. ಈ ವರ್ಷ ಅವರು ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಫೆಬ್ರವರಿ 17ರಿಂದ ಮಾರ್ಚ್ 11ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಅವರಿಗೆ ಪ್ರವೇಶ ಪತ್ರ (Admit Card) ಕೂಡ ವಿತರಿಸಲಾಗಿತ್ತು. ಸಮೀಪದ ಪೊದ್ದಾರ್ ಇಂಟರ್‌ನ್ಯಾಷನಲ್ ಶಾಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ನಿಗದಿಪಡಿಸಲಾಗಿತ್ತು. ಆದರೂ, ಅಂತಿಮ ಕ್ಷಣದಲ್ಲಿ ವೈಭವ್ ಪರೀಕ್ಷೆಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ.
ಕಾರಣವೇನು ?
ಅಂಡರ್-19 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ನಂತರ ವೈಭವ್ ಅವರ ಬದುಕು ಹೊಸ ವೇಗ ಪಡೆದುಕೊಂಡಿದೆ. ಪ್ರಸ್ತುತ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಶಿಬಿರಗಳು, ವಿವಿಧ ಸರಣಿಗಳು ಮತ್ತು ತರಬೇತಿ ಶಿಬಿರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮನೆ ಮತ್ತು ಶಾಲೆಯಿಂದ ದೂರವಿದ್ದು ನಿರಂತರವಾಗಿ ಕ್ರಿಕೆಟ್‌ನಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಪರೀಕ್ಷೆಗೆ ಬೇಕಾದ ಕನಿಷ್ಠ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಕ್ಕಿಲ್ಲ. ಅರೆಬರೆ ಸಿದ್ಧತೆಯೊಂದಿಗೆ ಪರೀಕ್ಷೆ ಬರೆಯುವ ಬದಲು, ಕ್ರಿಕೆಟ್ ಕಡೆಗೆ ಗಮನ ಹರಿಸುವುದು ಸೂಕ್ತ ಎಂದು ಪರೀಕೆಯಿಂದ ದೂರ ಉಳಿದಿದ್ದಾರೆ.
ವೈಭವ್ ತಂದೆ ಸಂಜೀವ್ ಸೂರ್ಯವಂಶಿ ಅವರು ಶಾಲಾ ಆಡಳಿತ ಮಂಡಳಿಯೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ಕಠಿಣ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಅಥವಾ ಸೂಕ್ತ ಸಮಯದಲ್ಲಿ ಪರೀಕ್ಷೆಯನ್ನು ಬರೆಯುವ ಯೋಜನೆಯನ್ನು ಅವರು ಹೊಂದಿದ್ದಾರೆ.
ಕ್ರೀಡೆ ಮತ್ತು ಶಿಕ್ಷಣ
ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವಾಗ ಶಿಕ್ಷಣವನ್ನು ಸರಿದೂಗಿಸುವುದು ಸುಲಭದ ಮಾತಲ್ಲ. ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಇಂದಿನ ಯುವ ಆಟಗಾರರವರೆಗೆ ಹಲವರು ಇಂತಹ ಸಂದಿಗ್ಧತೆಯನ್ನು ಎದುರಿಸಿದ್ದಾರೆ. 14ನೇ ವಯಸ್ಸಿನಲ್ಲಿ ಐಪಿಎಲ್ ಹರಾಜಿನಲ್ಲೂ ಸದ್ದು ಮಾಡಿದ್ದ ಈ ಯುವ ಬ್ಯಾಟರ್, ಸದ್ಯಕ್ಕೆ ತನ್ನ ಸಂಪೂರ್ಣ ಗಮನವನ್ನು ಕ್ರೀಡೆಯಲ್ಲೇ ತೊಡಗಿಸಿಕೊಂಡಿದ್ದಾರೆ.
