ಕೊಲಂಬೊ: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಐಸಿಸಿ ಟಿ20 ವಿಶ್ವಕಪ್ 2026ರ ಗ್ರೂಪ್ ಹಂತದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಇಂದು (ಫೆಬ್ರವರಿ 15) ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಶ್ರೀಲಂಕಾದ ಕೊಲಂಬೊದಲ್ಲಿರುವ ಐತಿಹಾಸಿಕ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.
ಸೂಪರ್-8 ಹಾದಿಗೆ ಈ ಗೆಲುವು ಅನಿವಾರ್ಯ
ಎರಡೂ ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದಲ್ಲದೆ, ಅಧಿಕೃತವಾಗಿ ಸೂಪರ್-8 ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಹೀಗಾಗಿ ಮೈದಾನದಲ್ಲಿ ಇಂದು ಎರಡೂ ತಂಡ ಅಬ್ಬರಿಸಲಿದೆ.
ಇರ್ಫಾನ್ ಪಠಾಣ್ ಮಾಸ್ಟರ್ ಪ್ಲಾನ್
ಕೊಲಂಬೊದ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಗುಣ ಹೊಂದಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಟೀಂ ಇಂಡಿಯಾಕ್ಕೆ ವಿಶೇಷ ಸಲಹೆ ನೀಡಿದ್ದಾರೆ. ಅವರ ಪ್ರಕಾರ, ಭಾರತ ಈ ಪಂದ್ಯದಲ್ಲಿ ಮೂವರು ಪರಿಣಿತ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದು ಸೂಕ್ತ.
ವೇಗಿ ಅರ್ಷ್‌ದೀಪ್ ಸಿಂಗ್ ಬದಲಿಗೆ ಚೀನಾಮನ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಪಠಾಣ್ ಸಲಹೆ ನೀಡಿದ್ದಾರೆ. ಇದರ ಜೊತೆಗೆ ಕುಲ್‌ದೀಪ್ ಅವರ ಗೂಗ್ಲಿಗಳು ಪಾಕಿಸ್ತಾನಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಹಕಾರಿ. ಸ್ಪಿನ್ ವಿಭಾಗದಲ್ಲಿ ಕುಲ್‌ದೀಪ್ ಜೊತೆಗೆ ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಜೋಡಿ ಇರಬೇಕೆಂದು ಹೇಳಿದರು.
ರಿಂಕು ಸಿಂಗ್ ಪರ ಬ್ಯಾಟ್ ಬೀಸಿದ ಪಠಾಣ್
ಕಳೆದ ಕೆಲವು ಪಂದ್ಯಗಳಲ್ಲಿ ರಿಂಕು ಸಿಂಗ್ ಅವರಿಂದ ದೊಡ್ಡ ಮೊತ್ತದ ರನ್ ಬಂದಿಲ್ಲವಾದರೂ, ಪಾಕಿಸ್ತಾನದಂತಹ ಒತ್ತಡದ ಪಂದ್ಯಕ್ಕೆ ಅವರ ಅನಿವಾರ್ಯತೆ ಇದೆ ಎಂದು ಪಠಾಣ್ ಹೇಳಿದ್ದಾರೆ. ವಾಷಿಂಗ್ಟನ್ ಸುಂದರ್ ಅವರ ಬದಲಿಗೆ ರಿಂಕು ಸಿಂಗ್ ಕಣಕ್ಕಿಳಿದರೆ, ಪಂದ್ಯದ ಕೊನೆಯ ಓವರ್‌ಗಳಲ್ಲಿ (Death Overs) ತಂಡಕ್ಕೆ ಸ್ಫೋಟಕ ಫಿನಿಶಿಂಗ್ ನೀಡಬಲ್ಲರು ಎಂದು ತಿಳಿಸಿದರು.
ಇರ್ಫಾನ್ ಪಠಾಣ್ ಪ್ರಕಾರ ಪಾಕಿಸ್ತಾನ ವಿರುದ್ದ ಕಣಕ್ಕಿಯಬೇಕಾದ ತಂಡ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ.
