ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ 14 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಚೊಚ್ಚಲ ಐಪಿಎಲ್ ಟೂರ್ನಿಯಲ್ಲೇ ಶತಕ ಮತ್ತು ಅರ್ಧಶತಕ ಸಿಡಿಸಿ, ಐಪಿಎಲ್ ಇತಿಹಾಸದಲ್ಲಿ ಅಪೂರ್ವ ದಾಖಲೆ ಬರೆದಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 33 ಎಸೆತಗಳಲ್ಲಿ 57 ರನ್‌ಗಳ ಭರ್ಜರಿ ಅರ್ಧಶತಕ ಗಳಿಸಿದರು. ಈ ಇನಿಂಗ್ಸ್‌ನಲ್ಲಿ 4 ಸಿಕ್ಸ್‌ಗಳು ಮತ್ತು 4 ಫೋರ್‌ಗಳನ್ನು ಸಿಡಿಸಿದ ಅವರು, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲುವಿನ ದಾರಿ ಮಾಡಿಕೊಟ್ಟರು.
ಐತಿಹಾಸಿಕ ದಾಖಲೆ
ವೈಭವ್ ಸೂರ್ಯವಂಶಿ ಈ ಐಪಿಎಲ್‌ನಲ್ಲಿ 7 ಇನಿಂಗ್ಸ್‌ಗಳಿಂದ 252 ರನ್ ಕಲೆಹಾಕಿದ್ದಾರೆ. ಇದರೊಂದಿಗೆ, ಐಪಿಎಲ್ ಇತಿಹಾಸದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ 250 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, 18 ವರ್ಷ ತುಂಬುವ ಮುನ್ನ ಶತಕ ಮತ್ತು ಅರ್ಧಶತಕ ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.