ವಿಜಯ್ ಹಜಾರೆ ಟ್ರೋಫಿ: ಬರೋಬ್ಬರಿ 15 ಸಿಕ್ಸ್..ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

Untitled design 2025 12 24T195130.715

ರಾಂಚಿ / ಹೊಸದಿಲ್ಲಿ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆಯುವ ಮೂಲಕ ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬಿಹಾರ ತಂಡವನ್ನು ಪ್ರತಿನಿಧಿಸುತ್ತಿರುವ ಈ ಕಿರಿಯ ಬ್ಯಾಟರ್, ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ನಡೆಸಿದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ಜಗತ್ತನ್ನೇ ಅಚ್ಚರಿ ಮೂಡಿಸಿದೆ.

ವೈಭವ್ ಸೂರ್ಯವಂಶಿ ಕೇವಲ 84 ಎಸೆತಗಳಲ್ಲಿ 190 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದು, ಇದರಲ್ಲಿ 16 ಬೌಂಡರಿ ಮತ್ತು 15 ಸಿಕ್ಸರ್‌ಗಳು ಸೇರಿವೆ.

36 ಬಾಲ್‌ಗಳಲ್ಲಿ ಶತಕ – ದಾಖಲೆಗಳ ಸರಮಾಲೆ

ಅರುಣಾಚಲ ಪ್ರದೇಶದ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದ ವೈಭವ್, ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಸಾಧನೆಯೊಂದಿಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ ಅತಿ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಜೊತೆಗೆ, ಭಾರತದ ಪರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಎರಡನೇ ಆಟಗಾರನಾಗಿ ಹೆಸರು ದಾಖಲಿಸಿದರು.

ಭಾರತೀಯರ ಪಟ್ಟಿಯಲ್ಲಿ ಈವರೆಗೆ ಅತಿ ವೇಗದ ಶತಕದ ದಾಖಲೆ ಪಂಜಾಬಿನ ಅನ್ಮೋಲ್‌ಪ್ರೀತ್ ಸಿಂಗ್ ಅವರ ಹೆಸರಿನಲ್ಲಿದ್ದು, ಅವರು 35 ಬಾಲ್‌ಗಳಲ್ಲಿ ಶತಕ ಬಾರಿಸಿದ್ದರು. ವೈಭವ್ ಕೇವಲ ಒಂದು ಬಾಲ್‌ ಅಂತರದಿಂದ ಆ ದಾಖಲೆ ತಪ್ಪಿಸಿಕೊಂಡರೂ, ವಯಸ್ಸಿನ ದೃಷ್ಟಿಯಿಂದ ಇದು ಅಪೂರ್ವ ಸಾಧನೆಯಾಗಿದೆ.

ವಿಶ್ವ ದಾಖಲೆಯ 150 ರನ್‌

ಈ ಪಂದ್ಯದಲ್ಲಿ ವೈಭವ್ ಮತ್ತೊಂದು ಮಹತ್ವದ ದಾಖಲೆಗೂ ಸಾಕ್ಷಿಯಾದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 150 ರನ್ ಗಳಿಸಿದ ವಿಶ್ವ ದಾಖಲೆ ಅವರ ಹೆಸರಿಗೆ ಸೇರಿತ್ತು. ಅವರು ಕೇವಲ 54 ಬಾಲ್‌ಗಳಲ್ಲಿ 150 ರನ್ ಪೂರೈಸಿದರು. ಇದಕ್ಕೂ ಮೊದಲು ಈ ದಾಖಲೆ ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿಡಿ ವಿಲಿಯರ್ಸ್ ಅವರ ಹೆಸರಿನಲ್ಲಿದ್ದು, ಅವರು 64 ಬಾಲ್‌ಗಳಲ್ಲಿ 150 ರನ್ ಗಳಿಸಿದ್ದರು.

ಕೈತಪ್ಪಿದ ದ್ವಿಶತಕ

ಎಲ್ಲರೂ ದ್ವಿಶತಕದ ನಿರೀಕ್ಷೆಯಲ್ಲಿದ್ದಾಗ, ವೈಭವ್ ಸೂರ್ಯವಂಶಿ 10 ರನ್‌ ಅಂತರದಿಂದ 200 ರನ್ ದಾಖಲೆಯನ್ನು ಕೈತಪ್ಪಿಸಿಕೊಂಡರು. ತಂಡದ ಮೊತ್ತ 26.4 ಓವರ್‌ಗಳಲ್ಲಿ 261 ರನ್ ಆಗಿದ್ದಾಗ, ಅವರು ಎರಡನೇ ವಿಕೆಟ್‌ ಆಗಿ ಔಟಾದರು.

ವೈಭವ್ ಸೂರ್ಯವಂಶಿ – ರನ್ ಗಳಿಸಿದ ವೇಗ

ಇಷ್ಟೊಂದು ಕಿರಿಯ ವಯಸ್ಸಿನಲ್ಲಿ ಇಂತಹ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್‌ಗೆ ಭವಿಷ್ಯದ ಭರವಸೆಯ ಆಟಗಾರನಾಗಿ ಕಾಣುತ್ತಿದ್ದಾರೆ.

Exit mobile version