ಬೆಂಗಳೂರು, ಮೇ 12: ಮೇ 10ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಮುಖಾಮುಖಿ ಪಂದ್ಯ ಅಭಿಮಾನಿಗಳಿಗೆ ಕೊನೆಯ ಕ್ಷಣದವರೆಗೂ ಭರ್ಜರಿ ರೋಚಕತೆ ನೀಡಿತ್ತು. ಆದರೆ ಪಂದ್ಯ ಮುಗಿದ ಬಳಿಕ ನಡೆದ ಒಂದು ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಅಸಭ್ಯ ಸನ್ನೆ ಮಾಡಿದ್ದು, ಆಔಋಈಘೇ ಈಗ ನಿಷೇಧದ ಭೀತಿಯೂ ಎದುರಾಗಿದೆ.
ರಾಯಪುರದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೊನೆಯ ಓವರ್ ತನಕ ಹೋರಾಟ ನಡೆಸಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. ತಂಡದ ಗೆಲುವಿನ ಸಂಭ್ರಮದ ವೇಳೆ ಟಿಮ್ ಡೇವಿಡ್ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದರು. ಇದೇ ವೇಳೆ ಅವರು ಮಧ್ಯದ ಬೆರಳು ತೋರಿಸುವ ಅಸಭ್ಯ ಸನ್ನೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ನಡೆ ಕ್ರೀಡಾಭಿಮಾನಿಗಳ ಆಕ್ರೋಶಕ್ಕೂ ಕಾರಣವಾಯಿತು.
ಐಪಿಎಲ್ ಆಡಳಿತ ಮಂಡಳಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಐಪಿಎಲ್ ನೀತಿ ಸಂಹಿತೆಯ ನಿಯಮ 2.6ರ ಪ್ರಕಾರ ಅಸಭ್ಯ, ಅವಮಾನಕರ ಅಥವಾ ಆಕ್ಷೇಪಾರ್ಹ ವರ್ತನೆ ಕಠಿಣ ಕ್ರಮಕ್ಕೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಮ್ಯಾಚ್ ರೆಫರಿ ಅಮಿತ್ ಶರ್ಮಾ ಟಿಮ್ ಡೇವಿಡ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಟಿಮ್ ಡೇವಿಡ್ ಅವರಿಗೆ ಪಂದ್ಯದ ಸಂಭಾವನೆಯ ಶೇ.30ರಷ್ಟು ದಂಡ ವಿಧಿಸಲಾಗಿದೆ. ಇದಲ್ಲದೆ, ಅವರ ಖಾತೆಗೆ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನೂ ಸೇರಿಸಲಾಗಿದೆ. ಆದರೆ ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿಧಿಸಲಾದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.
ಈ ಎರಡು ಡಿಮೆರಿಟ್ ಪಾಯಿಂಟ್‌ಗಳು ಟಿಮ್ ಡೇವಿಡ್‌ಗೆ ಮುಂದಿನ ಪಂದ್ಯಗಳಲ್ಲಿ ತಲೆನೋವಾಗಬಹುದು. ಯಾಕೆಂದರೆ ಐಪಿಎಲ್ ನಿಯಮಗಳ ಪ್ರಕಾರ ಆಟಗಾರರು ನಿಗದಿತ ಮಿತಿಗಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ ಒಂದು ಅಥವಾ ಹೆಚ್ಚಿನ ಪಂದ್ಯಗಳಿಗೆ ನಿಷೇಧ ಎದುರಿಸಬೇಕಾಗುತ್ತದೆ. ಈಗಾಗಲೇ ಎರಡು ಪಾಯಿಂಟ್‌ಗಳನ್ನು ಪಡೆದಿರುವ ಟಿಮ್ ಡೇವಿಡ್ ಮತ್ತಷ್ಟು ತಪ್ಪು ಮಾಡಿದರೆ ನೇರವಾಗಿ ಒಂದು ಪಂದ್ಯದ ಬ್ಯಾನ್‌ಗೆ ಒಳಗಾಗುವ ಸಾಧ್ಯತೆ ಇದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದ್ರೆ, ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಭುವನೇಶ್ವರ್ ಕುಮಾರ್ ಅವರ ಪರಿಣಾಮಕಾರಿ ಬೌಲಿಂಗ್ ಎದುರು ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಬೇಗನೇ ಪೆವಿಲಿಯನ್ ಸೇರಿದರು. ಆದರೆ ತಿಲಕ್ ವರ್ಮಾ ಮತ್ತು ನಮನ್ ಧೀರ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಹೋರಾಟದ ಮೊತ್ತಕ್ಕೆ ಕೊಂಡೊಯ್ದರು. ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 166 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆರ್‌ಸಿಬಿಗೂ ಆರಂಭ ಸುಲಭವಾಗಿರಲಿಲ್ಲ. ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿ ಅಭಿಮಾನಿಗಳಿಗೆ ಶಾಕ್ ನೀಡಿದರು. ಈ ವೇಳೆ ಕೃನಾಲ್ ಪಾಂಡ್ಯ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಅವರು 46 ಎಸೆತಗಳಲ್ಲಿ 73 ರನ್ ಸಿಡಿಸಿ ಗೆಲುವಿನ ದಾರಿ ತೋರಿಸಿದರು.
ಕೊನೆಯ ಓವರ್‌ನಲ್ಲಿ ಪಂದ್ಯ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿತು. ಭುವನೇಶ್ವರ್ ಕುಮಾರ್ ಬಾರಿಸಿದ ಸಿಕ್ಸರ್ ಹಾಗೂ ರಸಿಖ್ ಸಲಾಮ್ ಅವರ ಸಮಯೋಚಿತ ಆಟದಿಂದ ಆರ್‌ಸಿಬಿ ರೋಚಕ ಜಯ ಸಾಧಿಸಿತು.
