ಮುಂಬೈ: ಟಿ20 ವಿಶ್ವಕಪ್ 2026ರ ಅತ್ಯಂತ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿವೆ. ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ 7 ಗಂಟೆಗೆ ಈ ಮಹತ್ವದ ಪಂದ್ಯ ನಡೆಯಲಿದ್ದು, ವಿಶ್ವ ಕ್ರಿಕೆಟ್ ಅಭಿಮಾನಿಗಳ ಕಣ್ಣುಗಳು ಈ ಪೈಪೋಟಿಯತ್ತ ನೆಟ್ಟಿವೆ. ಸತತ ಮೂರನೇ ಬಾರಿ ಈ ಎರಡು ಬಲಿಷ್ಠ ತಂಡಗಳು ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎದುರಾಗುತ್ತಿರುವುದು ಪಂದ್ಯಕ್ಕೆ ಇನ್ನಷ್ಟು ರೋಚಕತೆ ನೀಡಿದೆ.
ಭಾರತ ತಂಡ ಗುಂಪು ಹಂತದಲ್ಲಿ ಅಜೇಯ ಪ್ರದರ್ಶನ ನೀಡಿ ನಾಲ್ಕೂ ಪಂದ್ಯಗಳನ್ನು ಗೆದ್ದಿತ್ತು. ಆದರೆ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡರೂ ನಂತರದ ಎರಡು ಮಹತ್ವದ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಮತ್ತೊಂದೆಡೆ ಇಂಗ್ಲೆಂಡ್ ತಂಡ ಗುಂಪು ಹಂತದಲ್ಲಿ ಕೆಲವು ಸವಾಲುಗಳನ್ನು ಎದುರಿಸಿದರೂ ಸೂಪರ್-8 ಹಂತದಲ್ಲಿ ಪಾಕಿಸ್ತಾನ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಸೆಮೀಸ್‌ಗೆ ಪ್ರವೇಶಿಸಿದೆ.
ಭಾರತೀಯ ತಂಡದ ಬ್ಯಾಟಿಂಗ್ ವಿಭಾಗ ಈ ಪಂದ್ಯದಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ತಂಡದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್ ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅದ್ಭುತ 97 ರನ್ ಸಿಡಿಸಿ ಗಮನ ಸೆಳೆದಿದ್ದರು. ಆದರೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಇನ್ನೂ ಬಂದಿಲ್ಲ.
ಟೂರ್ನಿಯ ಆರಂಭದಲ್ಲಿ ಉತ್ತಮ ಫಾರ್ಮ್ ತೋರಿದ್ದ ಇಶಾನ್ ಕಿಶನ್ ಇತ್ತೀಚಿನ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲರಾಗುತ್ತಿದ್ದಾರೆ. ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಕೂಡ ಬ್ಯಾಟ್‌ನಿಂದ ನಿರಂತರ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಕೂಡ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯ ಇದೆ.
ಆದರೆ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಂಡಕ್ಕೆ ಮಹತ್ವದ ಬಲ ನೀಡುತ್ತಿದ್ದಾರೆ. ಇವರಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.
ಬೌಲಿಂಗ್‌ನಲ್ಲಿ ಬೂಮ್ರಾ ಮೇಲೆ ಭರವಸೆ
ಭಾರತದ ಬೌಲಿಂಗ್ ದಾಳಿ ಕೂಡ ಪಂದ್ಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಲಿದೆ. ಜಸ್‌ಪ್ರೀತ್ ಬೂಮ್ರಾ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಎದುರಾಳಿಗಳ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ. ಅಂತಿಮ ಓವರ್‌ಗಳಲ್ಲಿ ರನ್‌ಗಳ ಹರಿವನ್ನು ತಡೆಯುವುದು ಭಾರತಕ್ಕೆ ದೊಡ್ಡ ಸವಾಲಾಗಲಿದೆ.
ಟಿ20 ವಿಶ್ವದ ನಂ.1 ಸ್ಪಿನ್ನರ್ ಎನ್ನಿಸಿಕೊಂಡಿರುವ ವರುಣ್ ಚಕ್ರವರ್ತಿ ಕೆಲ ಪಂದ್ಯಗಳಲ್ಲಿ ದುಬಾರಿಯಾಗಿದ್ದರೂ ಈ ಮಹತ್ವದ ಪಂದ್ಯದಲ್ಲಿ ಅವರನ್ನು ಹೊರಗಿಡುವ ಸಾಧ್ಯತೆ ಕಡಿಮೆ. ಅರ್ಶ್‌ದೀಪ್ ಸಿಂಗ್ ಕೂಡ ವೇಗದ ಬೌಲಿಂಗ್‌ನಲ್ಲಿ ತಂಡಕ್ಕೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಇಂಗ್ಲೆಂಡ್‌ನಿಂದ ಭಾರಿ ಸವಾಲು
ಇಂಗ್ಲೆಂಡ್ ತಂಡವೂ ಭರ್ಜರಿ ಬ್ಯಾಟಿಂಗ್ ಸಾಮರ್ಥ್ಯ ಹೊಂದಿದ್ದು ಭಾರತಕ್ಕೆ ಕಠಿಣ ಸವಾಲು ಒಡ್ಡಲಿದೆ. ನಾಯಕ ಹ್ಯಾರಿ ಬ್ರೂಕ್ ಉತ್ತಮ ಫಾರ್ಮ್‌ನಲ್ಲಿ ಇದ್ದು ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ವಿಲ್ ಜ್ಯಾಕ್ಸ್ ಮತ್ತು ಸ್ಯಾಮ್ ಕರ್ರನ್ ಪಂದ್ಯವನ್ನು ಏಕಾಂಗಿಯಾಗಿ ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ.
ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಮೊದಲಿನ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದು, ಇವರನ್ನು ಆರಂಭದಲ್ಲೇ ಕಟ್ಟಿಹಾಕುವುದು ಭಾರತಕ್ಕೆ ಅತ್ಯಂತ ಅಗತ್ಯ. ಬೌಲಿಂಗ್ ವಿಭಾಗದಲ್ಲಿ ಆದಿಲ್ ರಶೀದ್ ಸ್ಪಿನ್ ದಾಳಿಯಿಂದ ಮಧ್ಯಮ ಓವರ್‌ಗಳಲ್ಲಿ ಒತ್ತಡ ನಿರ್ಮಿಸಲು ಪ್ರಯತ್ನಿಸಲಿದ್ದಾರೆ.
ಪಿಚ್ ರಿಪೋರ್ಟ್
ವಾಂಖೆಡೆ ಕ್ರೀಡಾಂಗಣದ ಪಿಚ್ ಈ ಪಂದ್ಯಕ್ಕೆ ಮಹತ್ವದ ಪಾತ್ರವಹಿಸಲಿದೆ. ಫೆಬ್ರವರಿ 12 ಬಳಿಕ ಈ ಪಿಚ್ ಬಳಸಲಾಗಿಲ್ಲ. ಪಿಚ್ ಮೇಲೆ ಸ್ವಲ್ಪ ಹುಲ್ಲು ಇರುವುದರಿಂದ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ದೊರಕುವ ಸಾಧ್ಯತೆ ಇದೆ.
