ಚೆನ್ನೈ: 2026ರ ಟಿ20 ವಿಶ್ವಕಪ್‌ನ ಸೂಪರ್-8 ಹಂತದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಭಾರತಕ್ಕೆ ಈ ಗೆಲುವು ಸಂತಸ ತಂದಿದೆ.
ಸೂರ್ಯ ಪಡೆ ಅಬ್ಬರ: ದಾಖಲೆಯ 256 ರನ್!
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಮೊದಲು ಬೌಲಿಂಗ್ ಆಯ್ದುಕೊಂಡರು. ಆದರೆ, ಭಾರತೀಯ ಬ್ಯಾಟರ್‌ಗಳು ಈ ನಿರ್ಧಾರವನ್ನು ತಲೆಕೆಳಗಾಗಿಸಿದರು. ಆರಂಭದಿಂದಲೇ ಜಿಂಬಾಬ್ವೆ ಬೌಲರ್‌ಗಳ ವಿರುದ್ದ ಆರ್ಭಟಿಸಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದಾಗಿ ದಾಖಲಾಯಿತು.
257 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡವು, ಟೋನಿ ಮುನ್ಯೊಂಗಾ ಮತ್ತು ಬ್ರಿಯಾನ್ ಬೆನೆಟ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 18 ಓವರ್‌ಗಳ ವೇಳೆಗೆ ಜಿಂಬಾಬ್ವೆ 161/4 ರನ್ ಗಳಿಸಿತ್ತು. ಒಂದು ಹಂತದಲ್ಲಿ ಭಾರತಕ್ಕೆ ಆತಂಕ ಮೂಡಿಸಿದ್ದ ಈ ಜೋಡಿಯನ್ನು ಹತ್ತಿಕ್ಕುವಲ್ಲಿ ಅರ್ಶ್‌ದೀಪ್ ಸಿಂಗ್ ಯಶಸ್ವಿಯಾದರು. ರಯಾನ್ ಬರ್ಲ್ ಅವರ ವಿಕೆಟ್ ಪಡೆಯುವ ಮೂಲಕ ಅರ್ಶ್‌ದೀಪ್ ಪಂದ್ಯದ ಗತಿಯನ್ನೇ ಬದಲಿಸಿದರು. ಅಂತಿಮವಾಗಿ ಜಿಂಬಾಬ್ವೆ ನಿಗದಿತ ಓವರ್‌ಗಳಲ್ಲಿ ಭಾರತದ ಮೊತ್ತವನ್ನು ತಲುಪಲು ಸಾಧ್ಯವಾಗದೆ 72 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಭಾರತದ ನೆಟ್ ರನ್ ರೇಟ್-3.800 ಕ್ಕೆ ಕುಸಿದಿತ್ತು. ಹೀಗಾಗಿ, ಈ ಪಂದ್ಯವನ್ನು ಕೇವಲ ಗೆಲ್ಲುವುದು ಮಾತ್ರವಲ್ಲದೆ, ದೊಡ್ಡ ಅಂತರದಿಂದ ಗೆಲ್ಲುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಈಗ ಜಿಂಬಾಬ್ವೆ ವಿರುದ್ಧದ ಈ ದೊಡ್ಡ ಗೆಲುವು ಭಾರತದ ರನ್ ರೇಟ್ ಅನ್ನು ಸುಧಾರಿಸಿದೆ. ಮುಂದಿನ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಪಂದ್ಯವು ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದ್ದು, ಅಲ್ಲಿಯೂ ದೊಡ್ಡ ಜಯ ಸಾಧಿಸಿದರೆ ಮಾತ್ರ ಸೆಮಿಫೈನಲ್ ಪ್ರವೇಶ ಖಚಿತವಾಗಲಿದೆ.
ಮಾರ್ಚ್ 2002ರ ನಂತರ ಮೊದಲ ಬಾರಿಗೆ ಭಾರತವು ತವರಿನಲ್ಲಿ ಜಿಂಬಾಬ್ವೆಯನ್ನು ಎದುರಿಸುತ್ತಿದ್ದು, ಪ್ರೇಕ್ಷಕರ ಬೆಂಬಲದೊಂದಿಗೆ ಟೀಮ್ ಇಂಡಿಯಾ ತನ್ನ ಹಳೆಯ ವೈಭವಕ್ಕೆ ಮರಳಿದೆ.
