ಕೊಲಂಬೊ: ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ 2026ರ ಟಿ20 ವಿಶ್ವಕಪ್‌ನ ಮಹಾಸಮರಕ್ಕೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.
ಪಂದ್ಯದ ಆರಂಭಕ್ಕೂ ಮುನ್ನವೇ ಮೈದಾನದಲ್ಲಿ ಬಿಗುವಿನ ವಾತಾವರಣ ಕಂಡುಬಂತು. ಟಾಸ್ ಪ್ರಕ್ರಿಯೆ ಮುಗಿದ ನಂತರ ಸಾಂಪ್ರದಾಯಿಕವಾಗಿ ಉಭಯ ತಂಡಗಳ ನಾಯಕರು ಕೈ ಕುಲುಕುವುದು (Handshake) ವಾಡಿಕೆ. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ರಾಜಕೀಯ ಉದ್ವಿಗ್ನತೆ ಹಾಗೂ ‘ಆಪರೇಷನ್ ಸಿಂಧೂರ್’ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನಾಯಕರು ಕೈಕುಲುಕುವುದನ್ನು ನಿಲ್ಲಿಸಿದ್ದಾರೆ. ಇಂದಿನ ಪಂದ್ಯದಲ್ಲೂ ಅದೇ ಮುಂದುವರಿದಿದ್ದು, ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಘಾ ಪರಸ್ಪರ ಕೈ ಕುಲುಕದೇ ಪಂದ್ಯಕ್ಕೆ ಸಜ್ಜಾದರು.
ಮೊದಲು ಬ್ಯಾಟಿಂಗ್ ಮಾಡಲಿರುವ ಟೀಂ ಇಂಡಿಯಾ
ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶವನ್ನ ಭಾರತ ತಂಡ ಪಡೆದಿದೆ. ಕೊಲಂಬೊದ ಪಿಚ್ ಆರಂಭದಲ್ಲಿ ಬ್ಯಾಟಿಂಗ್‌ಗೆ ಪೂರಕವಾಗಿರುವ ನಿರೀಕ್ಷೆಯಿದೆ. ಭಾರತ ತಂಡದ ಪರ ಆರಂಭಿಕರಾಗಿ ಅಭಿಷೇಕ್ ಶರ್ಮಾ ಕಣಕ್ಕಿಳಿಯುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಪವರ್‌ಪ್ಲೇ ಅವಧಿಯಲ್ಲಿ ಗರಿಷ್ಠ ರನ್ ಕಲೆಹಾಕುವುದು ಸೂರ್ಯಕುಮಾರ್ ಸಾರಥ್ಯದ ಭಾರತದ ಪ್ರಮುಖ ಗುರಿಯಾಗಿದೆ.
ಪಾಕಿಸ್ತಾನದ ತಂತ್ರವೇನು ?
ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರ ಪ್ರಕಾರ, ಸಂಜೆ ವೇಳೆಗೆ ಮೈದಾನದಲ್ಲಿ ಇಬ್ಬನಿ (Dew) ಪ್ರಭಾವ ಇರಬಹುದಾದ ಕಾರಣ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಪಾಕ್ ವೇಗಿಗಳು ಆರಂಭದಲ್ಲೇ ಭಾರತದ ವಿಕೆಟ್ ಪಡೆಯಲು ಹೊಂಚು ಹಾಕುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದ್ದು, ವಿಶ್ವದ ಅತ್ಯಂತ ಕುತೂಹಲಕಾರಿ ಪಂದ್ಯ ಕೆಲವೇ ಕ್ಷಣದಲ್ಲಿ ಪ್ರಾರಂಭವಾಗಲಿದೆ.
