ಚಿಕ್ಕಬಳ್ಳಾಪುರ: ಜಿಲ್ಲೆಯ ಅವಲಗುರ್ಕಿ ಗ್ರಾಮದ ಸಮೀಪವಿರುವ ಈಶಾ ಫೌಂಡೇಶನ್‌ನಲ್ಲಿ ಮಹಾಶಿವರಾತ್ರಿಯ ಸಂಭ್ರಮದ ನಡುವೆಯೇ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ. 112 ಅಡಿಯ ಆದಿಯೋಗಿ ದರ್ಶನ ಪಡೆಯಲು ಲಕ್ಷಾಂತರ ಜನ ಜಮಾಯಿಸಿರುವ ಹೊತ್ತಲ್ಲೇ ಈ ಘಟನೆ ನಡೆದಿದ್ದು ಭಕ್ತರಲ್ಲಿ ಆತಂಕ ಮೂಡಿಸಿದೆ.
ಈಶಾ ಫೌಂಡೇಶನ್‌ನ ನಾಗಮಂಟಪದ ಮುಂಭಾಗದಲ್ಲಿರುವ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಸುತ್ತಮುತ್ತಲಿನ ಪ್ರದೇಶ ಹೊಗೆಯಿಂದ ಆವೃತವಾಗಿದೆ. ಯಾರೋ ದುಷ್ಕರ್ಮಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಲಕ್ಷಾಂತರ ಜನರು ನೆರೆದಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆದಿಯೋಗಿ ದರ್ಶನಕ್ಕೆ ಹರಿದು ಬಂದಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದೆ. ನೂರಕ್ಕೂ ಹೆಚ್ಚು ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಿದ್ದರೂ, ಜನದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬಸ್ ನಿಲ್ದಾಣಗಳಲ್ಲಿ ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲು ಕಂಡುಬಂದಿದ್ದು, ಮಹಿಳೆಯರು ಮತ್ತು ಮಕ್ಕಳು ಬಸ್ ಸಿಗದೆ ಪರದಾಡಿದರು.
ಜನಸಂದಣಿ ಮಿತಿ ಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಈಶಾ ಫೌಂಡೇಶನ್ ಕಡೆಗೆ ಬರದಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದರು. ಆದರೆ, ಭಕ್ತರು ಪೊಲೀಸರ ಸೂಚನೆ ಧಿಕ್ಕರಿಸಿ ಒಳ ನುಗ್ಗಲು ಯತ್ನಿಸಿದಾಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ನೂರಾರು ಎಕರೆ ಪ್ರದೇಶದ ಪಾರ್ಕಿಂಗ್ ಸ್ಥಳಗಳು ಭರ್ತಿಯಾಗಿದ್ದು, ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಮತ್ತು ಈಶಾ ಸ್ವಯಂಸೇವಕರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಒಂದೆಡೆ ಆಧ್ಯಾತ್ಮಿಕ ಸಂಭ್ರಮವಿದ್ದರೆ, ಮತ್ತೊಂದೆಡೆ ಅರಣ್ಯದ ಬೆಂಕಿ ಮತ್ತು ಟ್ರಾಫಿಕ್ ಅವಾಂತರಗಳು ಈ ಬಾರಿಯ ಶಿವರಾತ್ರಿಯನ್ನು ಸವಾಲಾಗಿಸಿವೆ.
