ನವದೆಹಲಿ: ಭಾರತೀಯ ಕ್ರಿಕೆಟ್ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ವಿವಾದದಿಂದ ತೀವ್ರ ಆಘಾತಕ್ಕೆ ಒಳಗಾಗಿದೆ. ದೇಶೀಯ ಪಂದ್ಯಾವಳಿಯಾದ ಸೈಯದ್ ಮುಸ್ತಾಕ್ ಅಲಿ ಟ್ರೋಫಿ 2025 ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ (ಎಸಿಎ) ನಾಲ್ವರು ಆಟಗಾರರನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಈ ಆಟಗಾರರು, ಅಮಿತ್ ಸಿನ್ಹಾ, ಇಶಾನ್ ಅಹ್ಮದ್, ಅಮನ್ ತ್ರಿಪಾಠಿ ಮತ್ತು ಅಭಿಷೇಕ್ ಠಾಕೂರಿ.
ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ (ಎಸಿಎ) ಕಾರ್ಯದರ್ಶಿ ಸನಾತನ್ ದಾಸ್ ಅವರು ಈ ವಿಚಾರವನ್ನು ಅಧಿಕೃತವಾಗಿ ದೃಢಪಡಿಸಿದ್ದು, ಅಮಿತ್ ಸಿನ್ಹಾ, ಇಶಾನ್ ಅಹ್ಮದ್, ಅಮನ್ ತ್ರಿಪಾಠಿ ಮತ್ತು ಅಭಿಷೇಕ್ ಠಾಕೂರಿ ಎಂಬ ನಾಲ್ವರು ಕ್ರಿಕೆಟಿಗರ ಮೇಲೆ ಮ್ಯಾಚ್ ಫಿಕ್ಸಿಂಗ್ ಸಂಬಂಧಿತ ಗಂಭೀರ ಆರೋಪಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. ಈ ನಾಲ್ವರು ಆಟಗಾರರನ್ನು ಪ್ರಾಥಮಿಕ ತನಿಖೆಯ ಆಧಾರದಲ್ಲಿ ಅಮಾನತುಗೊಳಿಸಲಾಗಿದೆ.
ಎಸಿಎ ಕಾರ್ಯದರ್ಶಿಯವರ ಹೇಳಿಕೆ ನೀಡಿರುವಂತೆ, 2025ರ ಸೈಯದ್ ಮುಸ್ತಾಕ್ ಅಲಿ ಟ್ರೋಫಿ ವೇಳೆ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಈ ಆರೋಪಗಳು ಸಂಬಂಧಿಸಿದ್ದಾಗಿವೆ. ಆರೋಪಿಗಳೆಲ್ಲರೂ ಅಸ್ಸಾಂ ತಂಡವನ್ನು ವಿವಿಧ ಹಂತಗಳಲ್ಲಿ ಪ್ರತಿನಿಧಿಸಿದ್ದ ಆಟಗಾರರಾಗಿದ್ದು, ಪಂದ್ಯಾವಳಿಯ ಸಂದರ್ಭದಲ್ಲಿ ಅಸ್ಸಾಂ ತಂಡದ ಸದಸ್ಯರಾಗಿದ್ದ ಕೆಲ ಆಟಗಾರರ ಮೇಲೆ ಪ್ರಭಾವ ಬೀರುವ ಮತ್ತು ಪ್ರಚೋದಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಗಂಭೀರ ಶಂಕೆ ವ್ಯಕ್ತವಾಗಿದೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಈ ನಾಲ್ವರು ಆಟಗಾರರು ಸೈಯದ್ ಮುಸ್ತಾಕ್ ಅಲಿ ಟ್ರೋಫಿ 2025ರ ವೇಳೆ ಅಸ್ಸಾಂನ ಆಡುವ ತಂಡದ ಭಾಗವಾಗಿರಲಿಲ್ಲ. ಆದರೂ ತಂಡದ ಆಟಗಾರರ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಆರೋಪವೇ ಈ ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಈ ಆರೋಪಗಳು ಬೆಳಕಿಗೆ ಬಂದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಭ್ರಷ್ಟಾಚಾರ ನಿಗ್ರಹ ಘಟಕ (ACU) ತನಿಖೆ ನಡೆಸಿದ್ದು, ಎಸಿಎ ಕೂಡ ಕಠಿಣ ಕ್ರಮ ಕೈಗೊಂಡಿದೆ. ನಾಲ್ವರು ಆರೋಪಿಗಳ ವಿರುದ್ಧ ಗುವಾಹಟಿಯ ಅಪರಾಧ ಶಾಖೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.
ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಬಿಸಿಸಿಐ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ” ಎಂದು ಎಚ್ಚರಿಕೆ ನೀಡಿದ್ದಾರೆ.
2025ರ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಅಸ್ಸಾಂ ತಂಡವು ಎಲೈಟ್ ಗ್ರೂಪ್ ‘ಎ’ಯಲ್ಲಿ ಸ್ಪರ್ಧಿಸಿತ್ತು. ಈ ತಂಡದಲ್ಲಿ ಭಾರತದ ಉದಯೋನ್ಮುಖ ತಾರೆ ರಿಯಾನ್ ಪರಾಗ್ ಕೂಡ ಇದ್ದರು. ಆದರೆ ಅಸ್ಸಾಂ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕೆ ತಲುಪಲಿಲ್ಲ. ಎಂಟು ತಂಡಗಳ ಗುಂಪಿನಲ್ಲಿ ಅಸ್ಸಾಂ ಏಳನೇ ಸ್ಥಾನ ಪಡೆದು, ಏಳು ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳನ್ನು ಮಾತ್ರ ದಾಖಲಿಸಿತ್ತು. ಈ ಹಿನ್ನೆಲೆ ಮ್ಯಾಚ್ ಫಿಕ್ಸಿಂಗ್ ಆರೋಪಗಳು ತಂಡದ ಸಾಧನೆಯ ಮೇಲೂ ಅನುಮಾನ ಹುಟ್ಟುವಂತೆ ಮಾಡಿವೆ.
ಮ್ಯಾಚ್ ಫಿಕ್ಸಿಂಗ್‌ಗೆ ಯಾವ ಶಿಕ್ಷೆ?
ಐಸಿಸಿ ಹಾಗೂ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಸಂಹಿತೆಗಳ ಪ್ರಕಾರ, ಮ್ಯಾಚ್ ಫಿಕ್ಸಿಂಗ್ ಅತ್ಯಂತ ಗಂಭೀರ ಅಪರಾಧವಾಗಿದೆ. ತಪ್ಪಿತಸ್ಥರೆಂದು ಸಾಬೀತಾದ ಆಟಗಾರರನ್ನು ನಿರ್ದಿಷ್ಟ ಅವಧಿಗೆ ಅಥವಾ ಅಪರಾಧದ ತೀವ್ರತೆಯನ್ನು ಅವಲಂಬಿಸಿ ಜೀವಮಾನದವರೆಗೆ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಂದ ನಿಷೇಧಿಸಬಹುದು.
