ಮುಂಬೈ: ಭಾರತದ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ವೈಯಕ್ತಿಕ ಜೀವನದಲ್ಲಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಳಪೆ ಫಾರ್ಮ್ ನಿಂದ ಸಂಕಷ್ಟ ಎದುರಿಸುತ್ತಿರುವ ಸೂರ್ಯ ಅವರ ಪತ್ನಿ ದೇವಿಶಾ ಶೆಟ್ಟಿ (Devisha Shetty) ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಸ್ವತಃ ಸೂರ್ಯಕುಮಾರ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
10 ವರ್ಷಗಳ ನಂತರ ಪೋಷಕರಾದ ಸೂರ್ಯ-ದೇವಿಶಾ
ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಅವರು ಜುಲೈ 7, 2016 ರಂದು ವಿವಾಹವಾಗಿದ್ದರು. ಅಂದರೆ ಸೂರ್ಯ ಅವರು ಟೀಂ ಇಂಡಿಯಾ ಪರ ಆಡುವ ಮೊದಲೇ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಾಲೇಜಿನ ದಿನಗಳಲ್ಲಿ ಪ್ರಾರಂಭವಾದ ಇವರ ಪ್ರೇಮಕಥೆ ಹಲವು ವರ್ಷಗಳ ಕಾಲ ಸಾಗಿತ್ತು. ಬಹಳ ದಿನಗಳ ಡೇಟಿಂಗ್ ಬಳಿಕ ಈ ಜೋಡಿ ಮದುವೆಯಾಗಿತ್ತು. ಈಗ, 10 ವರ್ಷಗಳ ದಾಂಪತ್ಯದ ಬಳಿಕ ಮೊದಲ ಮಗುವಿನ ಪೋಷಕರಾಗುವ ಭಾಗ್ಯ ಈ ದಂಪತಿಗೆ ಲಭಿಸಿದೆ.
ಕರ್ನಾಟಕದ ಅಳಿಯ ಸೂರ್ಯಕುಮಾರ್
ಸೂರ್ಯಕುಮಾರ್ ಯಾದವ್ ಅವರಿಗೆ ಕರ್ನಾಟಕದೊಂದಿಗಿನ ಅವಿನಾಭಾವ ಸಂಬಂಧ ಇದೆ. ಇದು ಕ್ರೀಡಾಭಿಮಾನಿಗಳಿಗೆ ತಿಳಿದಿರುವ ಸಂಗತಿ. ಸೂರ್ಯ ಅವರ ಪತ್ನಿ ದೇವಿಶಾ ಶೆಟ್ಟಿ ಕರ್ನಾಟಕದ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಲದವರು. ಈ ಕಾರಣಕ್ಕಾಗಿಯೇ ಸೂರ್ಯಕುಮಾರ್ ಅವರನ್ನು ಕನ್ನಡಿಗರು ‘ಕರ್ನಾಟಕದ ಅಳಿಯ’ ಎಂದು ಪ್ರೀತಿಯಿಂದ ಕರೆಯುತ್ತಾರೆ. ದೇವಿಶಾ ಅವರ ಕುಟುಂಬ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದರೂ, ಅವರ ಆರಾಧ್ಯ ದೈವ ಕಾಪು ಮಾರಿಯಮ್ಮ ದೇವಸ್ಥಾನವಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
2026 ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಅಂದುಕೊಂಡಂತೆ ಸದ್ದು ಮಾಡುತ್ತಿಲ್ಲ. ಈ ಆವೃತ್ತಿಯಲ್ಲಿ ಅವರು ಇಲ್ಲಿಯವರೆಗೆ ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದಾರೆ. ಅದರಲ್ಲೂ ಅವರ ಸ್ಟ್ರೈಕ್ ರೇಟ್ ಮತ್ತು ಸ್ಥಿರತೆ ಕುಸಿದಿರುವುದು ತಂಡದ ಬಳಗಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಆವೃತ್ತಿಯಲ್ಲಿ 717 ರನ್ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದ ಸೂರ್ಯ, ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಅಂದಿನಿಂದ ಅವರ ಬ್ಯಾಟ್ ಮೌನವಾಗಿದ್ದು, ಟೀಂ ಇಂಡಿಯಾ ಪರವಾದ ನಿರೀಕ್ಷೆಗಳನ್ನೂ ಅವರು ಪೂರೈಸಲಾಗದೆ ನಿರಾಸೆ ಮೂಡಿಸಿದ್ದಾರೆ.
