ವಿಶ್ವ ಫುಟ್‌ಬಾಲ್‌ನ ದೈತ್ಯ ತಂಡ, ಐದು ಬಾರಿಯ ಫಿಫಾ ವಿಶ್ವಕಪ್ ಚಾಂಪಿಯನ್ ಬ್ರೆಝಿಲ್ ತಂಡ ಭಾರತಕ್ಕೆ ಆಗಮಿಸಲಿದೆ. ಅಕ್ಟೋಬರ್ ತಿಂಗಳಲ್ಲಿ ಕೋಲ್ಕತಾದ ಐತಿಹಾಸಿಕ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಹೈ-ಪ್ರೊಫೈಲ್ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಯೋಜಿಸಲು ಸಿದ್ಧತೆಗಳು ನಡೆಯುತ್ತಿದ್ದು, ಇದಕ್ಕಾಗಿ ಬ್ರೆಝಿಲ್ ಫುಟ್‌ಬಾಲ್ ಕಾನ್ಫೆಡರೇಶನ್ (CBF) ಹಾಗೂ ಭಾರತೀಯ ಸಂಘಟಕರ ನಡುವೆ ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಗಳು ತಿಳಿಸಿವೆ.
ಭಾರತದ ಫುಟ್‌ಬಾಲ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಕೋಲ್ಕತಾ ನಗರವು ಈ ಐತಿಹಾಸಿಕ ಪಂದ್ಯಕ್ಕೆ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಪ್ರಸಿದ್ಧ ಯುವ ಭಾರತಿ ಕ್ರೀಡಾಂಗಣ (ಸಾಲ್ಟ್ ಲೇಕ್ ಸ್ಟೇಡಿಯಂ) ಈ ಪಂದ್ಯಕ್ಕೆ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಬ್ರೆಝಿಲ್ ತಂಡವು ಸೆಪ್ಟೆಂಬರ್ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳನ್ನು ಆಡಿದ ಬಳಿಕ ಅಕ್ಟೋಬರ್ ಆರಂಭದಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ವೇಳೆ ವಿಶ್ವದ ಅತ್ಯಂತ ಜನಪ್ರಿಯ ಫುಟ್‌ಬಾಲ್ ತಾರೆಗಳಲ್ಲಿ ಒಬ್ಬರಾದ ವಿನೀಶಿಯಸ್ ಜೂನಿಯರ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಭಾರತದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಬ್ರೆಝಿಲ್ ತಂಡದ ಎದುರಾಳಿ ಯಾರು ಎಂಬುದು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಆದರೆ ಏಷ್ಯಾ ಪ್ರವಾಸದ ಭಾಗವಾಗಿ ಜಪಾನ್ ವಿರುದ್ಧ ಬ್ರೆಝಿಲ್ ಸೆಣಸಾಡುವ ಸಾಧ್ಯತೆ ಇದೆ ಎಂದು ಕೆಲವು ಅಂತರರಾಷ್ಟ್ರೀಯ ವರದಿಗಳು ಸೂಚಿಸಿವೆ. ಈ ಪಂದ್ಯ ನಡೆದರೆ ಏಷ್ಯಾದ ಫುಟ್‌ಬಾಲ್ ಅಭಿಮಾನಿಗಳಿಗೆ ಇದು ಅಪರೂಪದ ಅನುಭವವಾಗಲಿದೆ.
ಕೋಲ್ಕತಾವನ್ನು ಆಯ್ಕೆ ಮಾಡಿರುವುದಕ್ಕೂ ವಿಶೇಷ ಕಾರಣವಿದೆ. ಇತ್ತೀಚಿನ ವರ್ಷಗಳಲ್ಲಿ ಬ್ರೆಝಿಲ್ ತಂಡಕ್ಕೆ ಕೋಲ್ಕತಾದ ಅಭಿಮಾನಿಗಳು ತೋರಿದ ಅಪಾರ ಬೆಂಬಲ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದೇ ಕಾರಣದಿಂದ ಬಾಂಗ್ಲಾದೇಶ ಮತ್ತು ಸಿಂಗಾಪುರದಂತಹ ದೇಶಗಳ ಸ್ಪರ್ಧೆಯನ್ನು ಹಿಂದಿಕ್ಕಿ ಕೋಲ್ಕತಾ ಆತಿಥ್ಯ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂ ಈಗಾಗಲೇ ಹಲವು ಐತಿಹಾಸಿಕ ಫುಟ್‌ಬಾಲ್ ಕ್ಷಣಗಳಿಗೆ ಸಾಕ್ಷಿಯಾಗಿದೆ. 2011ರಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ವೆನೆಜುವೆಲಾ ವಿರುದ್ಧ ಇಲ್ಲಿ ಸೌಹಾರ್ದ ಪಂದ್ಯ ಆಡಿತ್ತು. ಇದೀಗ ಬ್ರೆಝಿಲ್ ತಂಡದ ಆಗಮನದಿಂದ ಮತ್ತೊಮ್ಮೆ ವಿಶ್ವ ಫುಟ್‌ಬಾಲ್‌ನ ರೋಚಕ ಕ್ಷಣಗಳನ್ನು ಭಾರತೀಯ ಅಭಿಮಾನಿಗಳು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.
