ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿಗೆ ಕೊಲೆ ಬೆದರಿಕೆ ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ಗಂಗೂಲಿ ಅವರ ಹೆಸರಿಗೆ ಬೆದರಿಕೆ ಪತ್ರಗಳು ಬರುತ್ತಿದ್ದವು ಎನ್ನಲಾಗಿದ್ದು, ಇತ್ತೀಚೆಗೆ ಬಂದ ಪತ್ರದಲ್ಲಿ ಸೌರವ್ ಗಂಗೂಲಿ ಮತ್ತು ಅವರ ಪತ್ನಿಯನ್ನು ಕೊಲ್ಲುವುದಾಗಿ ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಗಂಗೂಲಿ ಪರವಾಗಿ ಪೊಲೀಸ್ ದೂರು ದಾಖಲಾಗಿದ್ದು, ಕೋಲ್ಕತ್ತಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸೋಮವಾರ ಸೌರವ್ ಗಂಗೂಲಿ ಅವರ ಕಚೇರಿಗೆ ಎರಡು ಬೆದರಿಕೆ ಪತ್ರಗಳು ಬಂದಿವೆ ಎನ್ನಲಾಗಿದೆ. ಈ ಪತ್ರಗಳಲ್ಲಿ ಗಂಗೂಲಿ ದಂಪತಿಗೆ ಮಾತ್ರವಲ್ಲದೆ, ಅವರ ಆಪ್ತರಿಗೂ ಹಾನಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಂಗೂಲಿ ಅವರ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ದಕ್ಷಿಣ ಕೋಲ್ಕತ್ತಾದ ಠಾಕೂರ್ಪುಕೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಗಂಗೂಲಿ ಅವರ ಹೆಸರಿಗೆ ಕಳೆದ ಸುಮಾರು ಆರು ತಿಂಗಳಿನಿಂದ ಇಂತಹ ಪತ್ರಗಳು ಬರುತ್ತಿದ್ದವು ಎನ್ನಲಾಗಿದೆ. ಆರಂಭದಲ್ಲಿ ಈ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ. ಆದರೆ ಇತ್ತೀಚಿನ ಪತ್ರದಲ್ಲಿ ಗಂಗೂಲಿ ಮತ್ತು ಅವರ ಪತ್ನಿಗೆ ನೇರವಾಗಿ ಜೀವ ಬೆದರಿಕೆ ಹಾಕಿರುವ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಪತ್ರಗಳ ಮೂಲ ಪತ್ತೆಗೆ ಪೊಲೀಸರ ಪ್ರಯತ್ನ
ಬೆದರಿಕೆ ಪತ್ರಗಳು ಎಲ್ಲಿಂದ ಬಂದಿವೆ ಮತ್ತು ಅವುಗಳನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಕೋಲ್ಕತ್ತಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ರಗಳಲ್ಲಿರುವ ಮಾಹಿತಿ, ಅವುಗಳ ಮೂಲ ಹಾಗೂ ಕೊರಿಯರ್ ಮೂಲಕ ಸಾಗಿದ ಹಾದಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಉತ್ತರ 24 ಪರಗಣ ಜಿಲ್ಲೆಯ ಬೆಲ್ಘಾರಿಯಾ ಪ್ರದೇಶದ ವ್ಯಕ್ತಿಯೊಬ್ಬರ ಸಂಪರ್ಕ ಈ ಪತ್ರಗಳಿಗೆ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಪತ್ರಗಳನ್ನು ಕಳುಹಿಸಲು ಬಳಸಲಾಗಿದೆ ಎನ್ನಲಾದ ಮೊಬೈಲ್ ಸಿಮ್‌ನ ಚಲನವಲನವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಪತ್ರಗಳನ್ನು ಕಳುಹಿಸಿದ ಕೊರಿಯರ್ ಸಂಸ್ಥೆಯ ಸಿಬ್ಬಂದಿಯಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಕೊರಿಯರ್ ಸೇವೆಯೊಂದಿಗೆ ಸಂಪರ್ಕ ಸಾಧಿಸಿ ಒಂದು ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಲಾಗಿದೆ. ಆ ಸಂಖ್ಯೆಯ ಬಳಕೆದಾರ ಹಾಗೂ ಅದರ ಚಲನವಲನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದುವರೆಗೆ ಬಂದಿರುವ ಎಲ್ಲಾ ಪತ್ರಗಳನ್ನೂ ಒಂದೇ ವ್ಯಕ್ತಿ ಅಥವಾ ಒಂದೇ ಗುಂಪು ಕಳುಹಿಸಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಬೆದರಿಕೆಯ ಹಿಂದಿನ ಕಾರಣವೇನು?
ಸೌರವ್ ಗಂಗೂಲಿ ಅವರಿಗೆ ಬೆದರಿಕೆ ಹಾಕಲು ಕಾರಣವೇನು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪತ್ರಗಳನ್ನು ಕಳುಹಿಸಿರುವ ವ್ಯಕ್ತಿಯ ಉದ್ದೇಶವೇನು, ವೈಯಕ್ತಿಕ ದ್ವೇಷವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
