ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧಾನ ಅವರ ಮದುವೆ ರದ್ದಾಗಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಸ್ವತಃ ಸ್ಮೃತಿ ಮಂಧಾನ ಅವರೇ ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾವನಾತ್ಮಕ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ನಮ್ಮ ಮದುವೆ ರದ್ದಾಗಿದೆ ಎಂಬುದು ನಿಜ. ಆದರೆ ಇದನ್ನು ಇಲ್ಲಿಗೆ ಮುಗಿಸಲು ಬಯಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಸ್ಮೃತಿ ಮತ್ತು ಬಾಲಿವುಡ್ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ಸಂಬಂಧ ಹಲವು ರೀತಿಯ ಗಾಳಿಸುದ್ದಿಗಳು ಹಬ್ಬಿದ್ದವು. ಮದುವೆ ಸಮಾರಂಭಗಳು ಅದ್ದೂರಿಯಾಗಿ ನಡೆಯುತ್ತಿದ್ದಂತೆಯೇ ಹಠಾತ್ತನೆ ನಿಂತಿದ್ದವು. ಸ್ಮೃತಿ ಅವರ ತಂದೆಯ ಅನಾರೋಗ್ಯವನ್ನು ಕಾರಣವೆಂದು ಚಿತ್ರತಂಡ ಹೇಳಿತ್ತು. ಆದರೆ ಪಲಾಶ್ ಮುಚ್ಚಲ್ ವಿರುದ್ಧ ವಂಚನೆ, ಪಿತೂರಿ ಮತ್ತು ಹಣಕಾಸು ದುರುಪಯೋಗದ ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳನ್ನು ಪಲಾಶ್ ಕುಟುಂಬ ತೀವ್ರವಾಗಿ ತಳ್ಳಿಹಾಕಿತ್ತು.
ಮದುವೆಗೆ ಬಂದಿದ್ದ ಸಹ ಆಟಗಾರ್ತಿಯರು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸ್ಮೃತಿ ಅವರ ಅಧಿಕೃತ ಹೇಳಿಕೆಯೊಂದಿಗೆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.
ಸ್ಮೃತಿ ಮಂಧಾನರ ಸ್ಪಷ್ಟನೆ:
“ಕಳೆದ ಕೆಲವು ವಾರಗಳಿಂದ ನನ್ನ ವೈಯಕ್ತಿಕ ಜೀವನದ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿವೆ. ನಾನು ಖಾಸಗಿತನವನ್ನು ಬಯಸುವ ವ್ಯಕ್ತಿ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ಪಷ್ಟನೆ ನೀಡುವುದು ಅನಿವಾರ್ಯವಾಗಿದೆ. ನಮ್ಮ ಮದುವೆ ರದ್ದಾಗಿದೆ ಎಂಬುದು ಸತ್ಯ. ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸಿ, ಈ ಘಟನೆಯಿಂದ ಹೊರಬರಲು ಸ್ವಲ್ಪ ಕಾಲಾವಕಾಶ ನೀಡಿ ಎಂದು ಕೋರುತ್ತೇನೆ.
ದೇಶಕ್ಕಾಗಿ ಅತ್ಯುನ್ನತ ಮಟ್ಟದಲ್ಲಿ ಆಡುವುದೇ ನನ್ನ ಮೊದಲ ಆದ್ಯತೆ. ಟ್ರೋಫಿಗಳನ್ನು ಗೆಲ್ಲುವುದು ಮತ್ತ ನನ್ನ ಗಮನ ಯಾವಾಗಲೂ ಕ್ರಿಕೆಟ್ ಮೇಲೆಯೇ ಇರುತ್ತದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು.” – ಸ್ಮೃತಿ ಮಂಧಾನ
ಕ್ರಿಕೆಟ್‌ಗೆ ಹಿಂದಿರುಗಲಿದ್ದಾರಾ ಸ್ಮೃತಿ?
ವೈಯಕ್ತಿಕ ಜೀವನದ ಈ ದೊಡ್ಡ ಹಿನ್ನಡೆಯ ನಡುವೆಯೂ ಸ್ಮೃತಿ ಅವರು ಕ್ರಿಕೆಟ್‌ನಲ್ಲಿ ಸಂಪೂರ್ಣ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ. ಭಾರತೀಯ ಮಹಿಳಾ ತಂಡದ ಮುಂದಿನ ಪಂದ್ಯಾವಳಿಗಳಲ್ಲಿ ಅವರ ಪ್ರದರ್ಶನಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.
