ಮುಂಬೈ, ಜೂನ್ 7: ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಟಿ20ಐ ಸರಣಿಗೆ ಭಾರತ ತಂಡದ ನಾಯಕತ್ವದಲ್ಲಿ ಬಿಸಿಸಿಐ ಮಹತ್ವದ ಬದಲಾವಣೆ ಮಾಡಿದೆ. ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿರುವ ಆಯ್ಕೆ ಸಮಿತಿ, ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರಿಗೆ ತಂಡದ ಚುಕ್ಕಾಣಿ ವಹಿಸಿಕೊಟ್ಟಿದೆ. ಈ ನಿರ್ಧಾರವನ್ನು ಸೂರ್ಯಕುಮಾರ್ ಯಾದವ್ ಅವರು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಹೇಳಿದ್ದೇನು?
ಮುಂಬೈ ಟಿ20 ಲೀಗ್ ಪಂದ್ಯದ ಟಾಸ್ ವೇಳೆ ಮಾತನಾಡಿದ ಸೂರ್ಯಕುಮಾರ್ ಯಾದವ್, “ಶ್ರೇಯಸ್ ಅಯ್ಯರ್ ಅವರು ಭಾರತ ಟಿ20 ತಂಡಕ್ಕೆ ನೂತನ ನಾಯಕರಾಗಿ ಆಯ್ಕೆಯಾಗಿರುವುದು ನನಗೆ ತುಂಬಾ ಖುಷಿ ತಂದಿದೆ. ಶ್ರೇಯಸ್ ಹಾಗೂ ನಾನು ಮುಂಬೈ ಮತ್ತು ಭಾರತ ತಂಡಕ್ಕಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ“ ಎಂದರು.
“ಸತತ ಮೂರನೇ ಬಾರಿಗೆ ಮುಂಬೈ ಮೂಲದ ಆಟಗಾರನೊಬ್ಬ ಭಾರತ ಟಿ20 ತಂಡಕ್ಕೆ ನಾಯಕನಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ಶ್ರೇಯಸ್ ಅವರು ಸಂಪೂರ್ಣ ಅರ್ಹ ನಾಯಕರಾಗಿದ್ದು, ಅವರಿಗೆ ನನ್ನ ಪೂರ್ಣ ಬೆಂಬಲವಿದೆ“ ಎಂದು ತಿಳಿಸಿದರು.
ಅಜಿತ್ ಅಗರ್ಕರ್ ಕ್ಲಾರಿಟಿ: “ಸೂರ್ಯಕುಮಾರ್ ಬದಲಿಗೆ ಆಯ್ಕೆ ಕಠಿಣ ನಿರ್ಧಾರ”
ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮಾತನಾಡಿ, ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಬದಲಿಸಿದ್ದು ಕಠಿಣ ನಿರ್ಧಾರ ಎಂದು ಒಪ್ಪಿಕೊಂಡರು. “ಅವರ ನೇತೃತ್ವದಲ್ಲಿ ಭಾರತ ಕಳೆದ ವಿಶ್ವಕಪ್ ಗೆದ್ದಿತ್ತು. ಪ್ರತಿಯೊಂದು ವಿಶ್ವಕಪ್ ಆವೃತ್ತಿಯ ಬಳಿಕ ತಂಡದ ಭವಿಷ್ಯದ ದೃಷ್ಟಿಯಿಂದ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ“ ಎಂದರು.
“ಸೂರ್ಯಕುಮಾರ್ ಯಾದವ್ ಅವರ ವೈಯಕ್ತಿಕ ಫಾರ್ಮ್ ಕೂಡ ಈ ನಿರ್ಧಾರಕ್ಕೆ ಮುಖ್ಯ ಕಾರಣ. ಮುಂಬರುವ ವಿಶ್ವಕಪ್‌ಗೆ ಇನ್ನೂ ಎರಡು ವರ್ಷಗಳಿಗಿಂತ ಹೆಚ್ಚು ಸಮಯವಿದೆ. ಈ ದೀರ್ಘಾವಧಿಯ ದೃಷ್ಟಿಕೋನದಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಅಗರ್ಕರ್ ಸ್ಪಷ್ಟಪಡಿಸಿದರು.
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಸಾಬೀತಾದ ಪ್ರದರ್ಶನ
ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಅಗರ್ಕರ್, “ಕಳೆದ ಕೆಲವು ವರ್ಷಗಳಲ್ಲಿ ವಿವಿಧ ತಂಡಗಳನ್ನು ಮುನ್ನಡೆಸಿರುವ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. ಈ ಬಾರಿಯ ಐಪಿಎಲ್‌ನ ಆರಂಭದ ಪಂದ್ಯಗಳಲ್ಲೂ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ“ ಎಂದರು.
“ನಾಯಕನಿಗೆ ಬೇಕಾಗುವ ಎಲ್ಲಾ ಗುಣಗಳನ್ನು ಅವರು ಪ್ರದರ್ಶಿಸಿದ್ದಾರೆ. ಅವರ ವೈಯಕ್ತಿಕ ಫಾರ್ಮ್ ಕೂಡ ಅತ್ಯುತ್ತಮವಾಗಿದೆ. ಕಳೆದ ಬಾರಿ ವಿಶ್ವಕಪ್ ತಂಡದಲ್ಲೇ ಅವರಿಗೆ ಸ್ಥಾನ ಸಿಗಬೇಕಿತ್ತು. ಆದರೆ ಸೂರ್ಯಕುಮಾರ್ ತಂಡದಲ್ಲಿದ್ದ ಕಾರಣ ಅವಕಾಶ ಸಿಕ್ಕಿರಲಿಲ್ಲ“ ಎಂದು ತಿಳಿಸಿದರು.
ಭಾರತ ಟಿ20 ತಂಡದ ಪಟ್ಟಿ
ನಾಯಕ: ಶ್ರೇಯಸ್ ಅಯ್ಯರ್
ಬ್ಯಾಟರ್ಗಳು: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ
ಆಲ್ರೌಂಡರ್ಗಳು: ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್
ಬೌಲರ್ಗಳು: ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್
ಮುಂಬೈ ಮೂಲದ ಮೂರನೇ ನಾಯಕ
ಸೂರ್ಯಕುಮಾರ್ ಯಾದವ್ ಅವರು ತಮ್ಮ ಹೇಳಿಕೆಯಲ್ಲಿ ಸೂಚಿಸಿದಂತೆ, ರೋಹಿತ್ ಶರ್ಮಾ ನಂತರ ಸೂರ್ಯಕುಮಾರ್, ಈಗ ಶ್ರೇಯಸ್ ಅಯ್ಯರ್ ಸತತವಾಗಿ ಮೂರನೇ ಮುಂಬೈ ಮೂಲದ ಆಟಗಾರ ಭಾರತದ ಟಿ20 ತಂಡದ ನಾಯಕರಾಗಿ ಅಲಂಕರಿಸುತ್ತಿರುವುದು ವಿಶೇಷವಾಗಿದೆ.
