WPL 2026: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಜಯ

Untitled design 2026 01 27T071407.231

ವಡೋದರಾದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಅತ್ಯಂತ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಮುಂಬೈ ಇಂಡಿಯನ್ಸ್ (MI) 15 ರನ್‌ಗಳ ಅಮೋಘ ಜಯ ಸಾಧಿಸಿದೆ. ಮುಂಬೈ ತಂಡದ ಆಲ್‌ರೌಂಡರ್ ಸಿವರ್ ಬ್ರಂಟ್ ಅವರ ಐತಿಹಾಸಿಕ ಶತಕ ಮತ್ತು ರಿಚಾ ಘೋಷ್ ಅವರ ಕೆಚ್ಚೆದೆಯ ಹೋರಾಟ ಈ ಪಂದ್ಯದ ಹೈಲೈಟ್ ಆಗಿತ್ತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

ಟಾಸ್ ಸೋತ ಮುಂಬೈ ಇಂಡಿಯನ್ಸ್ ಮೊದಲು  ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿತ್ತು. ಇಂಗ್ಲೆಂಡ್‌ನ ಆಟಗಾರ್ತಿ ಸಿವರ್ ಬ್ರಂಟ್ ಕ್ರೀಸ್‌ ಪಂದ್ಯದಲ್ಲಿ ರನ್‌ಗಳ ಮಳೆ ಸುರಿಸಿದರು. ಕೇವಲ 57 ಎಸೆತಗಳಲ್ಲಿ 16 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 100 ರನ್ ಗಳಿಸುವ ಮೂಲಕ WPL ಇತಿಹಾಸದಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು.

ಇವರಿಗೆ ಉತ್ತಮ ಸಾಥ್ ನೀಡಿದ ಹೀಲಿ ಮ್ಯಾಥ್ಯೂಸ್ 56 ರನ್ (39 ಎಸೆತ) ಗಳಿಸಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ ಕೊನೆಯಲ್ಲಿ 20 ರನ್ ಸಿಡಿಸಿದರು. ಎರಡನೇ ವಿಕೆಟ್‌ಗೆ ಮ್ಯಾಥ್ಯೂಸ್ ಮತ್ತು ಬ್ರಂಟ್ ನಡುವೆ ಮೂಡಿಬಂದ 131 ರನ್‌ಗಳ ಬೃಹತ್ ಜೊತೆಯಾಟದ ನೆರವಿನಿಂದ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್‌ಗಳ ಗುರಿ ನೀಡಿತು.

200 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 35 ರನ್‌ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡಾಗ ಆರ್‌ಸಿಬಿ ತಂಡ ಭಾರಿ ಸೋಲಿನ ಭೀತಿಯಲ್ಲಿತ್ತು. ಈ ಹಂತದಲ್ಲಿ ಮೈದಾನಕ್ಕಿಳಿದ ರಿಚಾ ಘೋಷ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ನಾಡಿನ್ ಡಿ ಕ್ಲರ್ಕ್ (28 ರನ್) ಅವರೊಂದಿಗೆ ಚೇತರಿಕೆ ನೀಡಿದ ರಿಚಾ, ಏಕಾಂಗಿ ಹೋರಾಟ ನಡೆಸಿದರು.

ರಿಚಾ ಘೋಷ್ ಕೇವಲ 50 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸ್ಫೋಟಕ ಸಿಕ್ಸರ್‌ಗಳ ನೆರವಿನಿಂದ 90 ರನ್ ಚಚ್ಚಿದರು. ವಿಶೇಷವಾಗಿ 19ನೇ ಓವರ್‌ನಲ್ಲಿ ರಿಚಾ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಆ ಓವರ್‌ನಲ್ಲಿ ಶ್ರೇಯಾಂಕ ಪಾಟೀಲ್ ಕೂಡ ಎರಡು ಬೌಂಡರಿ ಬಾರಿಸಿದ ಪರಿಣಾಮ ಒಟ್ಟು 27 ರನ್ ಗಳಿಸಿದರು.

ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ ಸವಾಲಿನ ಮೊತ್ತ ಬೇಕಿತ್ತು. ಅಮೆಲಿಯಾ ಕೆರ್ ಎಸೆದ ಅಂತಿಮ ಓವರ್‌ನಲ್ಲಿ ರಿಚಾ ಘೋಷ್ ಸತತ ಎರಡು ಸಿಕ್ಸರ್ ಬಾರಿಸಿದಾಗ ಆರ್‌ಸಿಬಿ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದರೆ, ಓವರ್‌ನ ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ರಿಚಾ ಕ್ಯಾಚ್ ನೀಡಿ ಔಟಾದರು. ಇದರಿಂದಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ 15 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಸೋತರೂ ಸಹ, ರಿಚಾ ಮತ್ತು ಶ್ರೇಯಾಂಕ ಅವರ 55 ರನ್‌ಗಳ ಸ್ಫೋಟಕ ಜೊತೆಯಾಟ ತಂಡದ ನೆಟ್ ರನ್ ರೇಟ್ ಕಾಪಾಡುವಲ್ಲಿ ಯಶಸ್ವಿಯಾಯಿತು.

Exit mobile version