ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ 48ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವೇ ಪಂದ್ಯ ಫಲಿತಾಂಶವನ್ನು ನಿರ್ಧರಿಸಿತು. 155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ, 17.3 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ತಂಡದ ಆರಂಭ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆರಂಭಿಕರಾದ ಕೆಎಲ್ ರಾಹುಲ್ ಕೇವಲ 12 ರನ್ ಗಳಿಸಿ ಔಟಾದರೆ, ಪಾತುಮ್ ನಿಸ್ಸಾಂಕಾ 19 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮದಲ್ಲೂ ಬ್ಯಾಟ್ಸ್‌ಮನ್‌ಗಳು ನಿರಾಶೆ ಮೂಡಿಸಿದರು. ನಿತೀಶ್ ರಾಣಾ 15 ರನ್ ಗಳಿಸಿದರೆ, ಕರುಣ್ ನಾಯರ್ 13 ರನ್‌ಗಳಿಗೆ ತಮ್ಮ ಇನಿಂಗ್ಸ್ ಮುಗಿಸಿದರು. ನಾಯಕ ಅಕ್ಷರ್ ಪಟೇಲ್ ಕೂಡ ಕೇವಲ 2 ರನ್‌ಗಳಿಗೆ ಔಟಾದರು.
ಈ ಸಂದರ್ಭದಲ್ಲಿ ಟ್ರಿಸ್ಟನ್ ಸ್ಟಬ್ಸ್ ಮತ್ತು ಸಮೀರ್ ರಿಝ್ವಿ ಜತೆಯಾಗಿ ತಂಡವನ್ನು ಸಂಕಷ್ಟದಿಂದ ಹೊರತೆಗೆಯಲು ಪ್ರಯತ್ನಿಸಿದರು. ಸ್ಟಬ್ಸ್ 38 ರನ್ ಹಾಗೂ ರಿಝ್ವಿ 40 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಇವರಿಬ್ಬರ ಸಹಕಾರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸಾಧಾರಣ ಮೊತ್ತವನ್ನು ಗಳಿಸಿತು.
ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಆರಂಭದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿತು. ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 6 ರನ್‌ಗಳಿಗೆ ಔಟಾದರೆ, ಉರ್ವಿಲ್ ಪಟೇಲ್ 17 ರನ್ ಗಳಿಸಿ ಔಟಾದರು. ಆದರೆ ನಂತರ ಕ್ರೀಸ್‌ಗೆ ಬಂದ ಸಂಜು ಸ್ಯಾಮ್ಸನ್ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು.
ಆರಂಭದಲ್ಲಿ ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಿದ ಸಂಜು, ಪವರ್‌ಪ್ಲೇ ನಂತರ ಅಬ್ಬರದ ಆಟ ಆರಂಭಿಸಿದರು. ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ನಂತರವೂ ಬಿರುಸಿನ ಆಟ ಮುಂದುವರಿಸಿದರು. ಯುವ ಆಟಗಾರ ಕಾರ್ತಿಕ್ ಶರ್ಮಾ ಜೊತೆಗೂಡಿ ಶತಕದ ಜೊತೆಯಾಟ ನಿರ್ಮಿಸಿ ತಂಡ ಗೆಲ್ಲಲು ಸುಲಭಗೊಳಿಸಿದರು.
ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಫೋರ್‌ಗಳೊಂದಿಗೆ ಅಜೇಯ 87 ರನ್ ಗಳಿಸಿ ಮಿಂಚಿದರು. ಮತ್ತೊಂದೆಡೆ ಕಾರ್ತಿಕ್ ಶರ್ಮಾ 41 ರನ್‌ಗಳ ಉಪಯುಕ್ತ ಇನಿಂಗ್ಸ್ ಆಡಿದರು. ಇವರಿಬ್ಬರ ಅದ್ಭುತ ಜೊತೆಯಾಟದ ನೆರವಿನಿಂದ ಸಿಎಸ್‌ಕೆ ತಂಡ 17.3 ಓವರ್‌ಗಳಲ್ಲಿ 159 ರನ್ ಗಳಿಸಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
