ಆರ್‌ಸಿಬಿ ಕ್ರೇಜ್: ಕೇವಲ 4 ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ ಸೋಲ್ಡ್‌ಔಟ್

Untitled design (10)

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ಕ್ರೇಜ್ ಎಂತಹದ್ದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಾರ್ಚ್ 28ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಕೇವಲ ನಾಲ್ಕು ನಿಮಿಷಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗಿವೆ.

ಮಂಗಳವಾರ ಸಂಜೆ 4 ಗಂಟೆಗೆ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭವಾಯಿತು. ಲಕ್ಷಾಂತರ ಅಭಿಮಾನಿಗಳು ಏಕಕಾಲದಲ್ಲಿ ಲಾಗಿನ್ ಆದ ಪರಿಣಾಮ, ಕೇವಲ 240 ಸೆಕೆಂಡುಗಳಲ್ಲೇ ಎಲ್ಲಾ ವಿಭಾಗದ ಟಿಕೆಟ್‌ಗಳು ‘ಸೋಲ್ಡ್ ಔಟ್’ (Sold Out) ಎಂಬ ಸಂದೇಶ ತೋರಿಸಲಾರಂಭಿಸಿದವು. ಇದರಿಂದಾಗಿ ಗಂಟೆಗಟ್ಟಲೆ ಕಾಯುತ್ತಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಕಳೆದ ವರ್ಷ ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತ್ತು. 17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಲಭಿಸಿದ ಈ ಪ್ರಶಸ್ತಿಯು ಅಭಿಮಾನಿಗಳಲ್ಲಿ ತಂಡದ ಮೇಲಿನ ಅಭಿಮಾನವನ್ನು ಹೆಚ್ಚಿಸಿದೆ. ಚಾಂಪಿಯನ್ ತಂಡವನ್ನು ತವರಿನ ಮೈದಾನದಲ್ಲಿ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ನಮ್ಮ ನೆಚ್ಚಿನ ತಂಡವನ್ನು ಮತ್ತೆ ಮೈದಾನದಲ್ಲಿ ನೋಡಲು ನಾವು ಹಲವು ತಿಂಗಳುಗಳಿಂದ ಕಾಯುತ್ತಿದ್ದೆವು ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷವೂ ಆರ್‌ಸಿಬಿ ಫ್ರಾಂಚೈಸಿಯು ಅಧಿಕೃತ ಫ್ಯಾನ್ ಗ್ರೂಪ್‌ಗಳಿಗೆ (Fan Groups) ನಿರ್ದಿಷ್ಟ ಸಂಖ್ಯೆಯ ಟಿಕೆಟ್‌ಗಳನ್ನು ಮೀಸಲಿಡುತ್ತಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಸೌಲಭ್ಯ ನೀಡಿಲ್ಲ ಎಂದು ‘ಆರ್‌ಸಿಬಿ ಫ್ಯಾನ್ ಆರ್ಮಿ’ಯ ಆದಿತ್ಯ ಭಾರದ್ವಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಉದ್ಘಾಟನಾ ಸಮಾರಂಭ ಮತ್ತು ಪಂದ್ಯವನ್ನು ನೋಡಲು ಬಹಳ ಕಾತುರದಿಂದ ಕಾಯುತ್ತಿದ್ದೆವು, ಆದರೆ ಈ ಬಾರಿ ನಮಗೆ ಟಿಕೆಟ್ ಲಭ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ

ಟಿಕೆಟ್ ಸಿಗದ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಾದ ಎಕ್ಸ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಮತ್ತು ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡಲು ಇಂತಹ ತಂತ್ರ ಅನುಸರಿಸಲಾಗುತ್ತಿದೆ ಎಂದು ಹಲವರು ಕಿಡಿಕಾರಿದ್ದಾರೆ.

Exit mobile version