ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕೆ ಟಿಕೆಟ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಮೇ 22ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಟಿಕೆಟ್ ಬೆಲೆಗಳನ್ನು ಶೇಕಡಾ 50 ರಿಂದ 110ರಷ್ಟು ಹೆಚ್ಚಳ ಮಾಡಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪಂದ್ಯ IPL ಲೀಗ್ ಹಂತದ ಕೊನೆಯ ಹಾಗೂ ಅತ್ಯಂತ ಮಹತ್ವದ ಪಂದ್ಯವಾಗಿದ್ದು, ಅಂಕಪಟ್ಟಿಯ ಎರಡು ಸ್ಥಾನಗಳ ಲೆಕ್ಕಾಚಾರವನ್ನು ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಕ್ಕೆ ಅಭಿಮಾನಿಗಳಿಂದ ಭಾರೀ ಬೇಡಿಕೆ ಉಂಟಾಗಿದೆ. Vವಿರಾಟ್ ಕೊಹ್ಲಿ ಅವರ ಜನಪ್ರಿಯತೆ ಟಿಕೆಟ್ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಟೆಸ್ಟ್ ಹಾಗೂ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕೊಹ್ಲಿ ಇದೀಗ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದರಿಂದ, ಅವರನ್ನು ನೇರವಾಗಿ ನೋಡುವ ಅವಕಾಶ ಅಭಿಮಾನಿಗಳಿಗೆ ಅಪರೂಪವಾಗಿದೆ. ಇದೇ ಕಾರಣದಿಂದ SRH ಫ್ರಾಂಚೈಸ್ ಈ ಪಂದ್ಯವನ್ನು ‘ಪ್ರೀಮಿಯಂ ಇವೆಂಟ್’ ಆಗಿ ಪರಿಗಣಿಸಿ ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ರೂ.900 ದರ ಹೊಂದಿದ್ದ ಮೇಲ್ ಶ್ರೇಣಿಯ ಸ್ಟ್ಯಾಂಡ್ ಟಿಕೆಟ್‌ಗಳು ಈಗ ರೂ.2000ಕ್ಕೆ ಏರಿಕೆಯಾಗಿದೆ. ಸೌತ್ ಫಸ್ಟ್ ಟೆರೇಸ್ ವಿಭಾಗದ ಟಿಕೆಟ್‌ಗಳು ರೂ.1500ರಿಂದ ನೇರವಾಗಿ ರೂ.3000ಕ್ಕೆ ಏರಿಕೆ ಕಂಡಿವೆ. ಮಧ್ಯಮ ಹಂತದ ಸಾಮಾನ್ಯ ಸ್ಟ್ಯಾಂಡ್‌ಗಳ ಟಿಕೆಟ್‌ಗಳು ರೂ.1910ರಿಂದ ರೂ.3500ಕ್ಕೆ ಹೆಚ್ಚಳಗೊಂಡಿದ್ದು, ಪ್ರೀಮಿಯಂ ಸ್ಟ್ಯಾಂಡ್‌ಗಳ ದರ ರೂ.2500ರಿಂದ ರೂ.4500ಕ್ಕೆ ತಲುಪಿದೆ.
ಅಷ್ಟೇ ಅಲ್ಲದೆ, ಕಾರ್ಪೊರೇಟ್ ಹಾಸ್ಪಿಟಾಲಿಟಿ ಬಾಕ್ಸ್‌ಗಳ ದರ ಕೂಡ ರೂ.30,000ರಿಂದ ರೂ.45,000ಕ್ಕೆ ಏರಿಕೆಯಾಗಿದೆ. ಅಂದರೆ ಈ ವಿಭಾಗದಲ್ಲಿಯೂ ಶೇಕಡಾ 50ರಷ್ಟು ಹೆಚ್ಚಳ ಮಾಡಲಾಗಿದೆ.
ಈ ಟಿಕೆಟ್ ಮಾರಾಟವನ್ನು ಅಧಿಕೃತವಾಗಿ District by Zomato ಮೂಲಕ ನಡೆಸಲಾಗಿದ್ದು, ಎಲ್ಲಾ ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿವೆ. ವರದಿಗಳ ಪ್ರಕಾರ, 2.16 ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್ ಸರದಿಯಲ್ಲಿ ನಿಂತಿದ್ದರೂ ಬಹುತೇಕ ಅಭಿಮಾನಿಗಳಿಗೆ ಟಿಕೆಟ್ ಸಿಗಲಿಲ್ಲ.
ಇತ್ತೀಚೆಗೆ IPL ಪಂದ್ಯಗಳ ಟಿಕೆಟ್‌ಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಘಟನೆಗಳು ಬೆಳಕಿಗೆ ಬಂದಿದ್ದವು. ಆದರೆ SRH ಫ್ರಾಂಚೈಸ್ ಇದೀಗ ಅಧಿಕೃತವಾಗಿಯೇ ‘ಡೈನಾಮಿಕ್ ಪ್ರೈಸಿಂಗ್’ ಮಾದರಿಯನ್ನು ಅನುಸರಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಬೇಡಿಕೆ ಹೆಚ್ಚಿದಂತೆ ಟಿಕೆಟ್ ದರವನ್ನು ಹೆಚ್ಚಿಸುವ ಕ್ರಮವನ್ನು ಕಾರ್ಪೊರೇಟ್ ಕಂಪನಿಗಳು ಸಾಮಾನ್ಯವಾಗಿ ಬಳಸುತ್ತವೆ. ಆದರೆ ಕ್ರೀಡಾಭಿಮಾನಿಗಳ ದೃಷ್ಟಿಯಲ್ಲಿ ಇದು ಮಧ್ಯಮ ವರ್ಗದ ಜನರಿಗೆ ಹೊರೆ ತಂದಿದೆ.
ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದು, “ಐಪಿಎಲ್ ಈಗ ಸಾಮಾನ್ಯ ಅಭಿಮಾನಿಗಳ ಕೈಗೆಟುಕದ ಮನರಂಜನೆಯಾಗಿದೆ” ಎಂದು ಟೀಕಿಸಿದ್ದಾರೆ. ವಿಶೇಷವಾಗಿ ಕುಟುಂಬ ಸಮೇತ ಪಂದ್ಯ ವೀಕ್ಷಿಸಲು ಹೋಗುವವರಿಗೆ ಈ ದರ ಏರಿಕೆ ದೊಡ್ಡ ಹೊರೆ ಆಗಲಿದೆ.
