ಐಪಿಎಲ್ 19ನೇ ಆವೃತ್ತಿಯು ಆರಂಭವಾಗುವುದಕ್ಕೆ ಕೆಲವೇ ಕ್ಷಣಗಳು ಬಾಕಿ ಇದೆ. ಶನಿವಾರದಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗಲಿವೆ. ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ತವರಿನಲ್ಲಿ ಆರಂಭಿಕ ಪಂದ್ಯ ಗೆಲ್ಲುವ ನಿರೀಕ್ಷೆ ಇದೆ.
ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಫಿಲ್ ಸಾಲ್ಟ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್, ನಾಯಕ ರಜತ್ ಪಾಟೀದಾರ್ ಮತ್ತು ಜಿತೇಶ್ ಶರ್ಮಾ ತಂಡಕ್ಕೆ ಭದ್ರತೆ ನೀಡಲಿದ್ದಾರೆ. ಕೊನೆಯ ಓವರ್‌ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಲು ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಅವರಂತಹ ದೈತ್ಯ ಹಿಟ್ಟರ್‌ಗಳಿರುವುದು ತಂಡದ ಪ್ಲಸ್ ಪಾಯಿಂಟ್.
ವಿದೇಶಿ ಆಟಗಾರರ ಆಯ್ಕೆಯ ಸವಾಲು
ತಂಡದ ಮ್ಯಾನೇಜ್‌ಮೆಂಟ್‌ಗೆ ನಾಲ್ವರು ವಿದೇಶಿ ಆಟಗಾರರನ್ನು ಆಯ್ಕೆ ಮಾಡುವುದು ದೊಡ್ಡ ತಲೆನೋವಾಗಿದೆ . ಫಿಲ್ ಸಾಲ್ಟ್, ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಅವರ ಸ್ಥಾನ ಬಹುತೇಕ ಖಚಿತವಾಗಿದೆ. ಆದರೆ, ನಾಲ್ಕನೇ ವಿದೇಶಿ ಆಟಗಾರನಾಗಿ ವೇಗಿ ಜೇಕಬ್ ಡಫಿ ಅವರನ್ನು ಆಡಿಸಬೇಕೇ ಅಥವಾ ಯುವ ಪ್ರತಿಭೆ ಜೇಕಬ್ ಬೆಥೆಲ್ ಅವರಿಗೆ ಅವಕಾಶ ನೀಡಬೇಕೇ ಎಂಬ ಗೊಂದಲವಿದೆ. ಅನುಭವಿ ವೇಗಿ ಜೋಶ್ ಹೇಜಲ್‌ವುಡ್ ಗಾಯದ ಕಾರಣ ಲಭ್ಯವಿಲ್ಲದಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಸ್ವಲ್ಪ ಹಿನ್ನಡೆ ಉಂಟುಮಾಡಿದೆ.
ಅನುಭವಿ ಭುವನೇಶ್ವರ್ ಕುಮಾರ್ ಅವರು ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅವರಿಗೆ ಸಾಥ್ ನೀಡಲು ಸ್ಪಿನ್ನರ್ ಸುಯಶ್ ಶರ್ಮಾ ಮತ್ತು ಯುವ ವೇಗಿ ಮಂಗೇಶ್ ಯಾದವ್ ಸಿದ್ಧರಾಗಿದ್ದಾರೆ. ಚಿನ್ನಸ್ವಾಮಿ ಮೈದಾನವು ಬ್ಯಾಟರ್‌ಗಳ ಸ್ವರ್ಗವಾಗಿರುವುದರಿಂದ, ಬೌಲರ್‌ಗಳು ರನ್ ನಿಯಂತ್ರಿಸುವಲ್ಲಿ ಎಚ್ಚರಿಕೆ ವಹಿಸಬೇಕಿದೆ. 2024ರಲ್ಲಿ ಇದೇ ಮೈದಾನದಲ್ಲಿ ಎಸ್‌ಆರ್‌ಹೆಚ್ ತಂಡವು ಆರ್‌ಸಿಬಿ ವಿರುದ್ಧ 287 ರನ್ ಚಚ್ಚಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸಂಭವನೀಯ ಆಡುವ 11ರ ಬಳಗ
-
ಆರ್‌ಸಿಬಿ: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ/ಮಂಗೇಶ್ ಯಾದವ್.
-
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ), ನಿತೇಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್, ಲಿಯಾಮ್ ಲಿವಿಂಗ್ಸ್ಟೋನ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸ್, ಜಯದೇವ್ ಉನಾದ್ಕಟ್.
ಮುಖಾಮುಖಿ ಇತಿಹಾಸ: ಇಲ್ಲಿಯವರೆಗೆ ಈ ಎರಡು ತಂಡಗಳು 25 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್‌ರೈಸರ್ಸ್ 13 ಬಾರಿ ಗೆಲುವು ಸಾಧಿಸಿದ್ದರೆ, ಆರ್‌ಸಿಬಿ 11 ಪಂದ್ಯಗಳಲ್ಲಿ ಜಯಗಳಿಸಿದೆ. ಅಂಕಿಅಂಶಗಳ ಪ್ರಕಾರ ಹೈದರಾಬಾದ್ ಮೇಲುಗೈ ಹೊಂದಿದ್ದರೂ, ಹಾಲಿ ಚಾಂಪಿಯನ್ ಆರ್‌ಸಿಬಿಯನ್ನು ತವರಿನಲ್ಲಿ ಸೋಲಿಸುವುದು ಅಷ್ಟು ಸುಲಭವಲ್ಲ.
