ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್ 28ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಎಲ್ಲಾ ತಂಡಗಳು ಭರ್ಜರಿ ಅಭ್ಯಾಸದಲ್ಲಿ ತೊಡಗಿರುವಾಗಲೇ ಆರ್‌ಸಿಬಿ ಮ್ಯಾನೇಜ್‌ಮೆಂಟ್ ತನ್ನ ಪ್ರಮುಖ ವೇಗಿ ಯಶ್ ದಯಾಳ್ ಪಂದ್ಯದಿಂದ ಔಟ್ ಆಗಿರುವ ಬಗ್ಗೆ ಬಗ್ಗೆ ಸ್ಪಷ್ಟನೆ ನೀಡಿದೆ.
ಯಶ್ ದಯಾಳ್ ಮೇಲಿರುವ ಗಂಭೀರ ಆರೋಪಗಳೇನು ?
2024ರಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದ ಉತ್ತರ ಪ್ರದೇಶದ ವೇಗಿ ಯಶ್ ದಯಾಳ್ ಸದ್ಯ ತೀವ್ರ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಆರ್‌ಸಿಬಿ ಚಾಂಪಿಯನ್ ಆದ ಬೆನ್ನಲ್ಲೇ ಇವರ ವಿರುದ್ಧ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಮೊದಲನೆಯದಾಗಿ, ಜೈಪುರದ ಯುವತಿಯೊಬ್ಬಳು ಯಶ್ ದಯಾಳ್ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಕ್ರಿಕೆಟ್‌ನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದರು ಎಂಬುದು ಆಕೆಯ ಗಂಭೀರ ಆರೋಪ. ಈ ಬೆನ್ನಲ್ಲೇ, ಗಾಜಿಯಾಬಾದ್‌ನಲ್ಲಿ ಮತ್ತೊಬ್ಬ ಯುವತಿ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣಗಳಿಂದಾಗಿ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಈಗಾಗಲೇ ಅವರಿಗೆ ದೇಶಿ ಕ್ರಿಕೆಟ್ ಆಡದಂತೆ ನಿಷೇಧ ಹೇರಿದೆ.
ಯಶ್ ದಯಾಳ್ ಅಲಭ್ಯತೆಯ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಆರ್‌ಸಿಬಿ, ಯಶ್ ಸದ್ಯ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ತಂಡವು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ. ಅವರು ನಮ್ಮ ಒಪ್ಪಂದದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ತಿಳಿಸಿದೆ. ವಿಶೇಷವೆಂದರೆ, ಯಶ್ ಅವರ ಬದಲಿಗೆ ಈವರೆಗೆ ಯಾವುದೇ ಹೊಸ ಆಟಗಾರನನ್ನು (Replacement) ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮ್ಯಾನೇಜ್‌ಮೆಂಟ್ ಉತ್ಸುಕತೆ ತೋರಿಸಿಲ್ಲ. ಇದು ತಂಡದ ಬೌಲಿಂಗ್ ವಿಭಾಗದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಆತಂಕ ಅಭಿಮಾನಿಗಳಲ್ಲಿ ಮನೆಮಾಡಿದೆ.
ಯಶ್ ದಯಾಳ್ ಅವರ ಅಲಭ್ಯತೆಯ ನಡುವೆಯೂ ತಂಡದ ಉಳಿದ ಆಟಗಾರರು ಚಿನ್ನಸ್ವಾಮಿ ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ತಂಡವನ್ನು ಸೇರಿಕೊಂಡಿದ್ದು, ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಆದರೆ, ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿದ್ದ ಯಶ್ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
