ಬೆಂಗಳೂರು: ಐಪಿಎಲ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈಗ ದೊಡ್ಡ ಆಘಾತವೊಂದು ಎದುರಾಗಿದೆ. ಏಪ್ರಿಲ್ 5 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸಿಎಸ್‌ಕೆ ವಿರುದ್ಧದ ಹೈವೋಲ್ವೇಜ್ ಪಂದ್ಯಕ್ಕೆ ತಂಡ ಸಜ್ಜಾಗುತ್ತಿರುವ ಬೆನ್ನಲ್ಲೇ, ತಂಡದ ಪ್ರಮುಖ ವೇಗಿ ನುವಾನ್ ತುಷಾರ ಅವರ ಲಭ್ಯತೆಯ ಬಗ್ಗೆ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಶ್ರೀಲಂಕಾದ ಖ್ಯಾತ ವೇಗಿ ಲಸಿತ್ ಮಲಿಂಗ ಅವರಂತೆಯೇ ಬೌಲಿಂಗ್ ಶೈಲಿ ಹೊಂದಿರುವ ನುವಾನ್ ತುಷಾರ ಅವರನ್ನು ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ 1.6 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದರೆ, ದುರದೃಷ್ಟವಶಾತ್ ತುಷಾರ ಅವರು ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಇತ್ತೀಚೆಗೆ ನಡೆಸಿದ ಕಡ್ಡಾಯ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ.
ಲಂಕಾ ಕ್ರಿಕೆಟ್ ಮಂಡಳಿಯ ಕಟ್ಟುನಿಟ್ಟಿನ ನಿಯಮದ ಪ್ರಕಾರ, ಯಾವುದೇ ಆಟಗಾರ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗದ ಹೊರತು ವಿದೇಶಿ ಲೀಗ್‌ಗಳಲ್ಲಿ ಆಡಲು ನಿರಪೇಕ್ಷಣಾ ಪತ್ರ (NOC) ಪಡೆಯಲು ಸಾಧ್ಯವಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ತುಷಾರ ಅವರಿಗೆ ಇದುವರೆಗೂ ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಕೇಂದ್ರ ಒಪ್ಪಂದಕ್ಕೆ ಗುಡ್‌ಬೈ ಹೇಳ್ತಾರಾ ತುಷಾರ?
ಆರ್‌ಸಿಬಿ ಪರ ಕಣಕ್ಕಿಳಿಯಲು ತುಡಿಯುತ್ತಿರುವ ನುವಾನ್ ತುಷಾರ, ಈಗ ಒಂದು ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಲಂಕಾ ಮಂಡಳಿಯ ನಿಯಮಾವಳಿಗಳು ಐಪಿಎಲ್ ಹಾದಿಗೆ ಅಡ್ಡಿಯಾಗುತ್ತಿರುವುದರಿಂದ, ಅವರು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕೇಂದ್ರ ಒಪ್ಪಂದದಿಂದಲೇ (Central Contract) ಹೊರಬರಲು ನಿರ್ಧರಿಸಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ನನ್ನನ್ನು ಈ ಒಪ್ಪಂದದಲ್ಲಿ ಸೇರಿಸಬೇಡಿ ಎಂದು ಅವರು ಮಂಡಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಒಪ್ಪಂದದಿಂದ ಹೊರಬಂದರೆ ಮುಕ್ತವಾಗಿ ವಿದೇಶಿ ಲೀಗ್‌ಗಳಲ್ಲಿ ಆಡಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ.
ಆರ್‌ಸಿಬಿಗೆ ತುಷಾರ ಯಾಕೆ ಅನಿವಾರ್ಯ ?
ಪವರ್‌ಪ್ಲೇನಲ್ಲಿ ಚೆಂಡನ್ನು ಅದ್ಭುತವಾಗಿ ಸ್ವಿಂಗ್ ಮಾಡುವ ಮತ್ತು ಡೆತ್ ಓವರ್‌ಗಳಲ್ಲಿ ನಿಖರವಾದ ಯಾರ್ಕರ್ ಎಸೆಯುವ ಕಲೆ ತುಷಾರ ಅವರಿಗಿದೆ. 30 ಅಂತರರಾಷ್ಟ್ರೀಯ ಪಂದ್ಯಗಳಿಂದ 36 ವಿಕೆಟ್ ಪಡೆದಿರುವ ಇವರು ಟಿ20 ಸ್ಪೆಷಲಿಸ್ಟ್ ಬೌಲರ್. ಕಳೆದ ಸೀಸನ್‌ನಲ್ಲಿ ಕೇವಲ ಒಂದು ಪಂದ್ಯ ಆಡಿದ್ದ ಅವರು, ಈ ಬಾರಿ ಆರ್‌ಸಿಬಿಯ ಮುಖ್ಯ ಬೌಲಿಂಗ್ ಅಸ್ತ್ರವಾಗುವ ನಿರೀಕ್ಷೆಯಲ್ಲಿದ್ದರು. ಒಂದು ವೇಳೆ ತುಷಾರ ಅವರು ಲಭ್ಯವಾಗದಿದ್ದರೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಬದಲಿ ವಿದೇಶಿ ವೇಗಿಯ ಹುಡುಕಾಟ ನಡೆಸಬೇಕಾಗುತ್ತದೆ.
