ಆರ್‌ಸಿಬಿ ಚಾಂಪಿಯನ್: ಕಿಂಗ್ ಕೊಹ್ಲಿಗೆ ತಮಿಳುನಾಡು ಸಿಎಂ ಸ್ಟಾಲಿನ್‌ ವಿಶೇಷ ಶುಭಾಶಯ!

Befunky collage 2025 06 04t111836.023

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025ರಲ್ಲಿ ತನ್ನ ಚೊಚ್ಚಲ ಟ್ರೋಫಿಯನ್ನು ಗೆದ್ದುಕೊಂಡು ಇತಿಹಾಸ ಸೃಷ್ಟಿಸಿದೆ. ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ರೋಮಾಂಚಕ ಗೆಲುವಿನೊಂದಿಗೆ, ರಜತ್ ಪಟಿದಾರ್ ನಾಯಕತ್ವದ ಆರ್‌ಸಿಬಿ 18 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿತು. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರ್‌ಸಿಬಿ ತಂಡಕ್ಕೆ ಮತ್ತು ವಿರಾಟ್ ಕೊಹ್ಲಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, “ಆರ್‌ಸಿಬಿ ಭಲೇ! ಭೇಷ್! ಈ ಋತುವಿನ ಐಪಿಎಲ್ ಅಚ್ಚರಿಗಳಿಂದ ಕೂಡಿತ್ತು. ರೋಮಾಂಚಕಾರಿ ಫೈನಲ್‌ನಲ್ಲಿ ನೀವು ಟ್ರೋಫಿಯನ್ನು ಎತ್ತಿಹಿಡಿದಿದ್ದೀರಿ. ವಿರಾಟ್ ಕೊಹ್ಲಿ, ನೀವು ಈ ಕನಸನ್ನು ವರ್ಷಗಳಿಂದ ಕಾಯ್ದುಕೊಂಡಿದ್ದೀರಿ, ಮತ್ತು ಇಂದು ರಾತ್ರಿ ಆ ಕಿರೀಟ ನಿಮಗೆ ಖಂಡಿತವಾಗಿಯೂ ಸರಿಹೊಂದುತ್ತದೆ. ಕಿಂಗ್ ಕೊಹ್ಲಿಗೆ ಶುಭಾಶಯಗಳು!” ಎಂದು ಬರೆದಿದ್ದಾರೆ. ಇದರ ಜೊತೆಗೆ, ಮುಂದಿನ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಬಲಿಷ್ಠವಾಗಿ ಮರಳುವುದರ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿಯು ಕೇವಲ ಕ್ರಿಕೆಟ್ ತಂಡವಷ್ಟೇ ಅಲ್ಲ, ಅದು ಕರ್ನಾಟಕದ ಹೆಮ್ಮೆ ಮತ್ತು ಕನ್ನಡಿಗರ ಅಸ್ಮಿತೆಯ ಸಂಕೇತವಾಗಿದೆ. ತಂಡದ ಗೆಲುವಿನೊಂದಿಗೆ, ಅಭಿಮಾನಿಗಳ ಸಂಭ್ರಮಾಚರಣೆ ಅಪಾರವಾಗಿತ್ತು. ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆಯು ‘ಈ ಸಲ ಕಪ್ ನಮ್ದು’ ಎಂದು ಸತ್ಯವಾಯಿತು. ಆರ್‌ಸಿಬಿಯ ಈ ಗೆಲುವು ಅಭಿಮಾನಿಗಳ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಬಲಪಡಿಸಿದೆ. ವಿರಾಟ್ ಕೊಹ್ಲಿಯ 18 ವರ್ಷಗಳ ನಿಷ್ಠೆ ಮತ್ತು ತಂಡದೊಂದಿಗಿನ ಒಡನಾಟವು ಈ ಗೆಲುವಿನೊಂದಿಗೆ ಪರಿಪೂರ್ಣವಾಯಿತು.

Exit mobile version