ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ: ಸಂತಾಪ ಸೂಚಿಸಿದ ಆರ್‌ಸಿಬಿ

Untitled design 2025 06 04t230112.564

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 17 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದ ಬಳಿ ಜಮಾಯಿಸಿದ್ದ ಅಭಿಮಾನಿಗಳಿಗೆ ಈ ಘಟನೆ ನರಕ ಸದೃಶವಾಯಿತು.

ಒಂದೆಡೆ ಅಭಿಮಾನಿಗಳ ಸಾವು-ನೋವಿನಿಂದ ಕ್ರೀಡಾಂಗಣದ ಹೊರಗೆ ಸಂಭವಿಸಿದರೂ, ಒಳಗೆ ಆರ್‌ಸಿಬಿ ತನ್ನ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಮುಂದುವರೆಸಿತು. ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಘಟನೆಯಾದ ಕೆಲ ಗಂಟೆಗಳ ಬಳಿಕವೂ ಆರ್‌ಸಿಬಿ ಫ್ರಾಂಚೈಸಿಯಿಂದ ಸಂತಾಪ ಸಂದೇಶವೊಂದೂ ಬಿಡುಗಡೆಯಾಗದಿರುವುದು ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿದೆ.

ಆರ್‌ಸಿಬಿ ತನ್ನ ಟ್ರೋಫಿ ಗೆಲುವಿನ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಒಡ್ಡದಿರುವುದೇ ಈ ದುರಂತಕ್ಕೆ ಕಾರಣವಾಯಿತು. ಕ್ರೀಡಾಂಗಣದ ಗೇಟ್‌ಗಳನ್ನು ತೆರೆದ ತಕ್ಷಣ ಜನಸಂದಣಿಯಿಂದ ಕಾಲ್ತುಳಿತ ಸಂಭವಿಸಿತ್ತು. ಕೆಲವರು ಗೋಡೆ ಹಾರಿ, ಮರ ಹತ್ತಿ ಒಳಗೆ ಪ್ರವೇಶಿಸಲು ಯತ್ನಿಸಿದರು. ಈ ಗೊಂದಲದ ನಡುವೆ 11 ಅಭಿಮಾನಿಗಳು ತಮ್ಮ ಪ್ರಾಣ ಕಳೆದುಕೊಂಡರು. ಆದರೂ, ಆರ್‌ಸಿಬಿ 15 ನಿಮಿಷಗಳ ಕಾರ್ಯಕ್ರಮವನ್ನು ಕ್ರೀಡಾಂಗಣದೊಳಗೆ ನಡೆಸಿತ್ತು.

ಗಂಟೆಗಳ ಬಳಿಕ, ಆರ್‌ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಸಂತಾಪ ಸಂದೇಶವನ್ನು ಪ್ರಕಟಿಸಿತ್ತು. “ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ದುರಂತದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಮುಖ್ಯವಾಗಿದೆ. ಈ ಘಟನೆಯಿಂದ ಜೀವಹಾನಿಯಾದವರಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. ಘಟನೆಯ ಬಗ್ಗೆ ತಿಳಿದ ತಕ್ಷಣ, ನಾವು ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿ, ಸ್ಥಳೀಯ ಆಡಳಿತದ ಮಾರ್ಗದರ್ಶನವನ್ನು ಅನುಸರಿಸಿದ್ದೇವೆ. ಎಲ್ಲಾ ಅಭಿಮಾನಿಗಳು ಸುರಕ್ಷಿತವಾಗಿರಲು ಮನವಿ ಮಾಡುತ್ತೇವೆ.”

ಈ ದುರಂತಕ್ಕೆ ಆಡಳಿತದ ನಿರ್ಲಕ್ಷ್ಯವೂ ಕಾರಣವೆಂದು ಆರೋಪಿಸಲಾಗಿದೆ. ಕ್ರೀಡಾಂಗಣದ ಹೊರಗೆ ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಜನರು ಒಳಗೆ ಪ್ರವೇಶಿಸಲು ಗೋಡೆಗಳನ್ನು ಹಾರಿದರು, ಮರಗಳನ್ನು ಏರಿದರು. ಈ ಗೊಂದಲಕ್ಕೆ ಕಾರಣವಾದವರು ಯಾರೆಂದು ಕಂಡುಹಿಡಿಯಲು ತನಿಖೆ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಬೆಂಗಳೂರಿನ ಸಂಚಾರ ವ್ಯವಸ್ಥೆ ಸರಿಯಾಗಿದ್ದಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Exit mobile version