ಆರ್‌ಸಿಬಿ ಚಾಂಪಿಯನ್: ಸಂಭ್ರಮಾಚರಣೆ ವೇಳೆ ಹೃದಯಾಘಾತದಿಂದ ಆರ್‌ಸಿಬಿ ಅಭಿಮಾನಿ ಸಾವು!

Befunky collage 2025 06 04t113806.141

ಬೆಳಗಾವಿ: ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಚೊಚ್ಚಲ ಚಾಂಪಿಯನ್‌ಶಿಪ್ ಗೆದ್ದ ಸಂಭ್ರಮದಲ್ಲಿ ಬೆಳಗಾವಿಯ ಓರ್ವ ಅಭಿಮಾನಿಯ ದುರಂತ ಸಾವಿನ ಘಟನೆ ನಡೆದಿದೆ. ಮೃತರನ್ನು ಮಂಜುನಾಥ ಕುಂಬಾರ (25) ಎಂದು ಗುರುತಿಸಲಾಗಿದೆ.

ಆರ್‌ಸಿಬಿ ತಂಡ ಐಪಿಎಲ್ 2025ರಲ್ಲಿ ತನ್ನ ಮೊದಲ ಟ್ರೋಫಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಈ ಗೆಲುವಿನ ಸಂತೋಷದಲ್ಲಿ ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಈ ಸಂಭ್ರಮ ದುರಂತವಾಗಿ ಪರಿವರ್ತನೆಯಾಯಿತು. ಆರ್‌ಸಿಬಿಯ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ ಕುಂಬಾರ, ತಂಡದ ಗೆಲುವಿನ ಸಂತಸದಲ್ಲಿ ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದ ವೇಳೆ ಒಮ್ಮಿಂದೊಮ್ಮೆಗೆ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರನ್ನು ಉಳಿಸಲಾಗಲಿಲ್ಲ.

ಈ ಘಟನೆಯಿಂದ ಅವರಾದಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮಂಜುನಾಥ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಗ್ರಾಮದಲ್ಲಿ ನಡೆಯಲಿದೆ. ಸ್ಥಳೀಯರು ಮತ್ತು ಆರ್‌ಸಿಬಿ ಅಭಿಮಾನಿಗಳು ಈ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ. ವಿರಾಟ್ ಕೊಹ್ಲಿಯ ಗೆಲುವಿನ ಕನಸಿನ ಜೊತೆಗೆ ತಮ್ಮ ಜೀವನವನ್ನೇ ತೊಡಗಿಸಿಕೊಂಡಿದ್ದ ಮಂಜುನಾಥ ಅವರ ನಿಧನವು ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಆಘಾತವನ್ನುಂಟುಮಾಡಿದೆ.

Exit mobile version