ಬೆಂಗಳೂರು, ಏಪ್ರಿಲ್ 4: IPL 2026 ರೋಚಕತೆ ತಾರಕಕ್ಕೇರುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ದ್ವಿತೀಯ ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ (ಏಪ್ರಿಲ್ 5) ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬದ್ಧ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಸೆಣಸಾಟ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ RCB ನಾಯಕ ರಜತ್ ಪಾಟೀದಾರ್ ಮತ್ತು ಆಟಗಾರ ಜಿತೇಶ್ ಶರ್ಮ ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಿರುಪತಿಯಲ್ಲಿ ವಿಶೇಷ ಪೂಜೆ
ಉಭಯ ಆಟಗಾರರು ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ತಂಡದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಅವರು ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಮತ್ತು ಲಡ್ಡು ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
IPL franchise RCB Captain Rajat Patidar, player Jithesh Sharma visit Tirumala temple. pic.twitter.com/2kfOQFn7as
— News Arena India (@NewsArenaIndia) April 4, 2026
ಪಂದ್ಯದ ಮಹತ್ವ
ಸತತ ಎರಡು ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಈ ಟೂರ್ನಿಯಲ್ಲಿ ಇದುವರೆಗೆ ಒಂದು ಪಂದ್ಯವನ್ನೂ ಗೆಲ್ಲದ CSK, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ ಬಲಿಷ್ಠ ಆರ್‌ಸಿಬಿ ತಂಡವನ್ನು ಸೋಲಿಸುವುದು ಅವರಿಗೆ ಸುಲಭದ ಮಾತಲ್ಲ. ಆರ್‌ಸಿಬಿ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮರ್ಥವಾಗಿದೆ.
ಪಂದ್ಯದ ದಿನ ಸಾರಿಗೆ ವ್ಯವಸ್ಥೆ
ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ಮತ್ತು BMTC ವಿಶೇಷ ಬಸ್ ಸೇವೆಗಳನ್ನು ಕಲ್ಪಿಸಿದೆ. ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮುಂದಿನ ದಿನ ಮಧ್ಯರಾತ್ರಿ 2 ಗಂಟೆವರೆಗೆ ವಿಸ್ತರಿಸಲಾಗಿದೆ. ವಿವಿಧ ಮಾರ್ಗಗಳಲ್ಲಿ ಕೊನೆಯ ರೈಲುಗಳ ಸಮಯ ಈ ಕೆಳಗಿನಂತಿದೆ.
-
ವೈಟ್ಫೀಲ್ಡ್ (ಕಾಡುಗೋಡಿ): ರಾತ್ರಿ 12:30
-
ಚಲ್ಲಘಟ್ಟ: ರಾತ್ರಿ 12:45
-
ರೇಷ್ಮೆ ಸಂಸ್ಥೆ ಮತ್ತು ಮಾದಾವರ: ರಾತ್ರಿ 12:45
-
ಬೊಮ್ಮಸಂದ್ರ: ರಾತ್ರಿ 1:00
-
ಆರ್.ವಿ. ರಸ್ತೆ: ರಾತ್ರಿ 2:00
-
ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್): ನಾಲ್ಕು ದಿಕ್ಕುಗಳಿಗೆ ರಾತ್ರಿ 1:30 ಕ್ಕೆ ಕೊನೆಯ ರೈಲು
BMTC ವಿಶೇಷ ಬಸ್ ಸೇವೆಗಳು
-
ಎಚ್ಎಎಲ್ ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣಕ್ಕೆ
-
ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ
-
ನಾಗವಾರ–ಟ್ಯಾನರಿ ರಸ್ತೆ ಮೂಲಕ ಆರ್.ಕೆ. ಹೆಗಡೆ ನಗರಕ್ಕೆ
-
ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್ಶಿಪ್ಗೆ
-
ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ಹೊಸಕೋಟೆ, ಬನಶಂಕರಿ ನಿಲ್ದಾಣಗಳಿಗೂ ವಿಶೇಷ ಬಸ್ ಸೇವೆಗಳು ಲಭ್ಯವಿರುತ್ತವೆ.
