RCB ಹೊಸ ಹೊಸ ಅಧ್ಯಾಯ: 17 ವರ್ಷಗಳ ದಾಖಲೆ ಬ್ರೇಕ್..18 ವರ್ಷಗಳ ಬರವೂ ನೀಗುತ್ತಾ..?

Film 2025 03 29t134121.764

2008ರಲ್ಲಿ ಅಂದರೆ ಸುಮಾರು 17 ವರ್ಷಗಳ ಹಿಂದೆ ಚೆನ್ನೈನ ಚೆಪಾಕ್‌ ಸ್ಟೇಡಿಯಮ್‌‌‌‌ನಲ್ಲಿ ಆರ್‌ಸಿಬಿ, ಚೆನ್ನೈ ವಿರುದ್ಧ ಗೆದ್ದಿತ್ತು. ಅದಾದ ಮೇಲೆ ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದಿರೋದು ಬೆಂಗಳೂರಿನ ಪಂದ್ಯಗಳಲ್ಲಿ ಮಾತ್ರ. ಒಂದಲ್ಲ..ಎರಡಲ್ಲ.. 17 ವರ್ಷಗಳ ಚೆನ್ನೈ ಚೆಪಾಕ್ ಸ್ಟೇಡಿಯಂ ಸೋಲಿನ ಸರಪಳಿಯನ್ನ ತುಂಡರಿಸಿ ಹೊಸ ಇತಿಹಾಸ ಬರೆದಿದೆ.
ಗೆದ್ದಿರೋದು ಸಣ್ಣ ವಿಜಯವಲ್ಲ.

ಬರೋಬ್ಬರಿ 50 ರನ್ ಗಳ ದಿಗ್ವಿಜಯ. ಈ ಒಂದು ಗೆಲುವೇ 18 ವರ್ಷಗಳ ಈ ಸಲ ಕಪ್ ನಮ್ದೇ ಅನ್ನೋ ನಿರೀಕ್ಷೆಗೆ ಮತ್ತೆ ಆಸೆಯ ಚಿಗುರು ಮೂಡಿಸಿದೆ.
ಏಕೆಂದರೆ ಆರ್‌ಸಿಬಿಯಲ್ಲಿ ಈ ಬಾರಿ ಕೊಹ್ಲಿ, ಒಂಟಿ ಸೈನಿಕ ಅಲ್ಲ. ಚೆನ್ನೈ ವಿರುದ್ಧ ಮ್ಯಾಚಿನಲ್ಲಿ ಒಬ್ಬಂಟಿ ಯೋಧ ಎಂದೇ ಹೆಸರಾಗಿರೋ ಕೊಹ್ಲಿ ಬ್ಯಾಟ್‌ ಜಾಸ್ತಿ ಸದ್ದು ಮಾಡಲಿಲ್ಲ. 31 ರನ್‌ ಹೊಡೆಯೋಕೆ 30 ಬಾಲ್‌ ತಗೊಂಡು ತಿಣುಕಿಬಿಟ್ರು.
ಆದರೆ, ಅದೇ ಫಿಲ್‌ ಸಾಲ್ಟ್‌ 16 ಬಾಲ್‌ಗೆ 32, ದೇವದತ್‌ ಪಡಿಕ್ಕಲ್‌ 14 ಬಾಲಿಗೆ 27 ರನ್‌, ಟಿಮ್‌ ಡೇವಿಡ್‌ 8 ಬಾಲಿಗೆ 22 ರನ್‌ ಹೊಡೆದ್ರೆ ಅಪ್ಪಟ ಕ್ಯಾಪ್ಟನ್‌ ಆಟ ಆಡಿದ ರಜತ್‌ ಪಾಟೀದಾರ್‌ 32 ಬಾಲಿಗೆ 51 ರನ್‌ ಚಚ್ಚಿದ್ಧಾರೆ. ಫೈನಲ್ ಆಗಿ 197 ಟಾರ್ಗೆಟ್ ಕೊಟ್ಟ ಆರ್‌ಸಿಬಿ, ಚೆನ್ನೈ ತಂಡವನ್ನ 146 ರನ್ನುಗಳಿಗೆ ಕಟ್ಟಿ ಹಾಕಿ ಗೆದ್ದಿದೆ.
ಪ್ರತೀ ಸಲ ಕೈಕೊಡ್ತಾ ಇದ್ದ ಬೌಲಿಂಗಿನಲ್ಲಿ ಈಗ ಬ್ರಹ್ಮಾಸ್ತ್ರಗಳೇ ಸೇರಿಕೊಂಡಿವೆ. ಚೆನ್ನೈ ವಿರುದ್ಧ 3 ವಿಕೆಟ್‌ ಪಡೆದ ಜೋಶ್‌ ಹೆಜಲ್‌ವುಡ್‌, ಕೇವಲ 1 ವಿಕೆಟ್‌ ಪಡೆದರೂ ಪ್ರಳಯಾಂತಕ ಬೌಲಿಂಗ್‌ ಮಾಡುವ ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌, ಲಿವಿಂಗ್‌ ಸ್ಟೋನ್‌, ಕೃನಾಲ್‌ ಪಾಂಡ್ಯ, ಹೊಸ ಹುಡುಗ ಸುಯಾಶ್‌ ಶರ್ಮಾ.. ಎಲ್ಲರೂ ಭರ್ಜರಿ ಆಡ್ತಿದ್ದಾರೆ.

17 ವರ್ಷದ ಹಿಂದೆ ಚೆಪಾಕ್‌ ನಲ್ಲಿ ಆರ್‌ಸಿಬಿ ಗೆದ್ದಾಗ ಪರಿಸ್ಥಿತಿ ಹೇಗಿತ್ತು ಗೊತ್ತಾ..? ಇಷ್ಟಕ್ಕೂ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ 17 ವರ್ಷಗಳ ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದಾಗ.. ಅನಿಲ್‌ ಕುಂಬ್ಳೆ, ಆರ್‌ಸಿಬಿ ಕ್ಯಾಪ್ಟನ್ ಆಗಿದ್ರು. ಅಷ್ಟೇ ಅಲ್ಲ, ಅವರಿನ್ನೂ ಟೀಂ ಇಂಡಿಯಾದ ಟೆಸ್ಟ್‌ ಟೀಂ ಕ್ಯಾಪ್ಟನ್‌ ಆಗಿದ್ದರು. ಸಚಿನ್‌ ತೆಂಡೂಲ್ಕರ್‌ ಇನ್ನೂ ಡಬಲ್‌ ಸೆಂಚುರಿ ಹೊಡೆದಿರಲಿಲ್ಲ. ವಿರಾಟ್‌ ಕೊಹ್ಲಿ ಇನ್ನೂ ಟೀಂ ಇಂಡಿಯಾ ಪ್ರವೇಶ ಮಾಡಿರ್ಲಿಲ್ಲ. ಅನೂಷ್ಕಾ ಶರ್ಮಾ ವಿರಾಟ್‌ ಕೊಹ್ಲಿಯನ್ನ ಮೀಟ್‌ ಮಾಡೋದು ಬಿಡಿ, ಬಾಲಿವುಡ್‌ಗೂ ಎಂಟ್ರಿ ಕೊಟ್ಟಿರಲಿಲ್ಲ. ಈಗ ಅನುಷ್ಕಾ ಕೊಹ್ಲಿ, ಎರಡು ಮಕ್ಕಳ ತಾಯಿ.
ಭಾರತದಲ್ಲಿ ಇಂಟರ್‌ ನೆಟ್‌ ಅನ್ನೋದು ದುಬಾರಿಯಾಗಿತ್ತು. 2ಜಿ ನೆಟ್‌ ವರ್ಕ್‌ ಇತ್ತು. ವಾಟ್ಸಪ್‌ ಇನ್ನೂ ಉದ್ಭವವಾಗಿರಲಿಲ್ಲ. ಪ್ರಧಾನಿ ಮೋದಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಈಗ ಐದೈದು ಟ್ರೋಫಿ ಗೆದ್ದಿರೋ ಮುಂಬೈ, ಚೆನ್ನೈ ಒಂದೂ ಟ್ರೋಫಿ ಗೆದ್ದಿರಲಿಲ್ಲ. ಚಿನ್ನದ ಬೆಲೆ 10 ಗ್ರಾಮ್‌, 12,500 ರೂಪಾಯಿ ಇತ್ತು. ಈಗ ಅದೇ ಚಿನ್ನ ಹೆಚ್ಚೂ ಕಡಿಮೆ 1 ಲಕ್ಷ ಇದೆ. ಇಂತಾದ್ದೊಂದು ಕೆಟ್ಟಗಳಿಗೆ ಆಗಿ ಹೋಗಿ ಶುಭ ಕಾಲ ಬಂದಿದೆ.
ರಜತ್‌ ಪಾಟೀದಾರ್‌ ಟೀಂ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಅವರದ್ದೇ ಚೆಪಾಕ್‌ ಕ್ರೀಡಾಂಗಣದಲ್ಲಿ ಬಗ್ಗು ಬಡಿದಿದೆ.

ಅಂಕಪಟ್ಟಿಯಲ್ಲಿ ಸದ್ಯಕ್ಕೆ ಆರ್‌ಸಿಬಿಯೇ ನಂ.1.
ಈಗ ಇನ್ನೊಂದು ಕನಸು ಶುರುವಾಗಿದೆ. 18 ವರ್ಷಗಳಿಂದ ಕಾಯುತ್ತಿರುವ ಟ್ರೋಫಿಯ ಕನಸೂ ನನಸಾಗುತ್ತಾ..? ಅಭಿಮಾನಿಗಳು ಕಾಯ್ತಿರೋದು ಇದಕ್ಕೇ. ಈ ಬಾರಿ ಆದ್ರೂ ಆರ್‌ಸಿಬಿ ಕಪ್ ಗೆಲ್ಲಲಿ. 17 ವರ್ಷಗಳ ಸೋಲಿನ ಸರಪಳಿಯನ್ನೇ ತುಂಡು ಮಾಡಿದ್ದೇವೆ, ಐಪಿಎಲ್ ಕಪ್ ಗೆಲ್ಲೋ ಕನಸು ನನಸು ಮಾಡೋದಿಲ್ವಾ ಅನ್ನೋ ವಿಶ್ವಾಸದಲ್ಲಿದ್ದಾರೆ ಆರ್‌ಸಿಬಿ ಫ್ಯಾನ್ಸ್.

Exit mobile version