ಬರೋಬ್ಬರಿ 11 ವರ್ಷಗಳ ಬಳಿಕ ಕರ್ನಾಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಫೈನಲ್‌ಗೆ ಅರ್ಹತೆ ಪಡೆದಿದೆ. ಕೊನೆಯ ಬಾರಿಗೆ 2014-15 ಸೀಸನ್‌ನಲ್ಲಿ ತಮಿಳುನಾಡನ್ನು ಇನಿಂಗ್ಸ್ ಮತ್ತು 217 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿದ್ದ ಕರ್ನಾಟಕ, ಈಗ ಮತ್ತೊಮ್ಮೆ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಉತ್ತರಾಖಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಡ್ರಾನಲ್ಲಿ ಮುಗಿದರೂ, ಮೊದಲ ಇನಿಂಗ್ಸ್‌ನಲ್ಲಿ ಪಡೆದ 503 ರನ್‌ಗಳ ಭರ್ಜರಿ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ಫೈನಲ್‌ಗೆ ಪ್ರವೇಶಿಸಿದೆ.
ಪಂದ್ಯದ ಸಂಕ್ಷಿಪ್ತ ವಿವರ :
ಟಾಸ್ ಗೆದ್ದ ಉತ್ತರಾಖಂಡ್ ನಾಯಕ ಕುನಾಲ್ ಚಂಡೆಲಾ ಬೌಲಿಂಗ್ ಆಯ್ಕೆ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ಪರ ಕೆಎಲ್ ರಾಹುಲ್ 141 ರನ್‌ಗಳ ಶತಕ ಸಿಡಿಸಿದರು. ನಾಯಕ ದೇವದತ್ ಪಡಿಕ್ಕಲ್ ಅಬ್ಬರದ 232 ರನ್‌ಗಳ ದ್ವಿಶತಕ ಬಾರಿಸಿದರು. ಸ್ಮರಣ್ ರವಿಚಂದ್ರನ್ 135 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು. ಕೃತಿಕ್ ಕೃಷ್ಣ 60 ಮತ್ತು ವಿದ್ಯಾಧರ್ ಪಾಟೀಲ್ 54 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಕರ್ನಾಟಕ ತಂಡ 194.4 ಓವರ್‌ಗಳಲ್ಲಿ 736 ರನ್‌ಗಳಿಸಿ ಆಲೌಟ್ ಆಯಿತು.
ಪ್ರತಿಯಾಗಿ ಉತ್ತರಾಖಂಡ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 233 ರನ್‌ಗಳಿಗೆ ಕುಸಿದಿತು. ಇದರಿಂದ ಕರ್ನಾಟಕಕ್ಕೆ 503 ರನ್‌ಗಳ ಮಹಾ ಮುನ್ನಡೆ ಸಿಕ್ಕಿತು.
ಫಾಲೋ-ಆನ್ ಹೇರದ ಕರ್ನಾಟಕ ಎರಡನೇ ಇನಿಂಗ್ಸ್ ಆರಂಭಿಸಿತು. ಇಲ್ಲಿ ಕೃತಿಕ್ ಕೃಷ್ಣ 52, ಸ್ಮರಣ್ ರವಿಚಂದ್ರನ್ 127 ಮತ್ತು ಕೆಎಲ್ ರಾಹುಲ್ 86 ರನ್‌ಗಳಿಸಿದರು. ತಂಡ 323 ರನ್‌ಗಳಿಸಿ ಆಲೌಟ್ ಆಯಿತು.
827 ರನ್‌ಗಳ ಗುರಿಯೊಂದಿಗೆ ಕಣಕ್ಕಿಳಿದ ಉತ್ತರಾಖಂಡ್ ಕೊನೆಯ ದಿನದ ಅಂತ್ಯಕ್ಕೆ 260 ರನ್‌ಗಳಷ್ಟೇ ಕಲೆಹಾಕಿತು. ಪಂದ್ಯ ಡ್ರಾನಲ್ಲಿ ಮುಗಿದರೂ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ಫೈನಲ್‌ಗೆ ತೆರಳಿದೆ.
ಫೈನಲ್ ಪಂದ್ಯ : ಫೆಬ್ರವರಿ 24ರಿಂದ ಆರಂಭವಾಗಲಿರುವ ಫೈನಲ್‌ನಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳು ತಲಪ್ಪಾಗಲಿವೆ. ಇದು ಜಮ್ಮು-ಕಾಶ್ಮೀರಕ್ಕೆ ಮೊದಲ ಬಾರಿಗೆ ರಣಜಿ ಫೈನಲ್ ಆಗಿದೆ.
ಕರ್ನಾಟಕ ಪ್ಲೇಯಿಂಗ್ 11 : ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.
ಉತ್ತರಾಖಂಡ್ ಪ್ಲೇಯಿಂಗ್ 11 : ಪ್ರಶಾಂತ್ ಚೋಪ್ರಾ, ಅವನೀಶ್ ಸುಧಾ, ಭೂಪೇನ್ ಲಾಲ್ವಾನಿ, ಕುನಾಲ್ ಚಂಡೆಲಾ (ನಾಯಕ), ಲಕ್ಷ್ಯ ರಾಜೇಶ್ ರಾಯ್‌ಚಂದಾನಿ, ಜಗದೀಶ ಸುಚಿತ್, ಸೌರಭ್ ರಾವತ್ (ವಿಕೆಟ್ ಕೀಪರ್), ಅಭಯ್ ನೇಗಿ, ಮಾಯಾಂಕ್ ಮಿಶ್ರಾ, ಆದಿತ್ಯ ರಾವತ್, ಜನಮೇಜಯ್ ಜೋಶಿ.
ಕರ್ನಾಟಕದ ಈ ಭರ್ಜರಿ ಪ್ರದರ್ಶನಕ್ಕೆ ಅಭಿನಂದನೆಗಳು. ಫೈನಲ್‌ನಲ್ಲಿ ಚಾಂಪಿಯನ್ ಪಟ್ಟ ಮತ್ತೊಮ್ಮೆ ಅಲಂಕರಿಸಲಿ.
