ಪ್ರೊ ಕಬಡ್ಡಿ ಲೀಗ್ 12 ಆರಂಭ: ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್-ತಮಿಳ್ ತಲೈವಾಸ್ ಮುಖಾಮುಖಿ

Untitled design 2025 08 29t111411.841

ವಿಶಾಖಪಟ್ಟಣಂ: ಪ್ರೊ ಕಬಡ್ಡಿ ಲೀಗ್‌ (PKL) 12ನೇ ಆವೃತ್ತಿಯು ಇಂದು, ಆಂಧ್ರಪ್ರದೇಶದ ವಿಶಾಖಪಟ್ಟಣಂನ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭರ್ಜರಿಯಾಗಿ ಆರಂಭವಾಗಲಿದೆ. ಏಳು ವರ್ಷಗಳ ಬಳಿಕ ವಿಶಾಖಪಟ್ಟಣಂನಲ್ಲಿ PKL ಪಂದ್ಯಗಳು ನಡೆಯುತ್ತಿದ್ದು, 12 ತಂಡಗಳು ಪ್ರಶಸ್ತಿಗಾಗಿ 119 ಪಂದ್ಯಗಳಲ್ಲಿ ಕಾದಾಡಲಿವೆ. ಉದ್ಘಾಟನಾ ದಿನದಂದು ತೆಲುಗು ಟೈಟಾನ್ಸ್ ಮತ್ತು ತಮಿಳ್ ತಲೈವಾಸ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ಪುಣೇರಿ ಪಲ್ಟನ್ ಎದುರಾಳಿಯಾಗಲಿದೆ.

ಈ ಬಾರಿಯ ಲೀಗ್‌ನಲ್ಲಿ 108 ಲೀಗ್‌ ಹಂತದ ಪಂದ್ಯಗಳು, 2 ಪ್ಲೇ-ಇನ್‌ ಪಂದ್ಯಗಳು, ಮತ್ತು 7 ಪ್ಲೇ-ಆಫ್‌ ಪಂದ್ಯಗಳು (ಫೈನಲ್‌ ಸೇರಿದಂತೆ) ಒಟ್ಟು 119 ಪಂದ್ಯಗಳನ್ನು ಒಳಗೊಂಡಿವೆ. ಆಗಸ್ಟ್ 29ರಿಂದ ಸೆಪ್ಟೆಂಬರ್ 11ರವರೆಗೆ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಸೆಪ್ಟೆಂಬರ್ 12ರಿಂದ 28ರವರೆಗೆ ಜೈಪುರದ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 10ರವರೆಗೆ ಚೆನ್ನೈನ ಎಸ್‌ಡಿಎಟಿ ಕ್ರೀಡಾಂಗಣದಲ್ಲಿ, ಮತ್ತು ಕೊನೆಯ ಪಂದ್ಯಗಳು, ಅಕ್ಟೋಬರ್ 11ರಿಂದ 23ರವರೆಗೆ ದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಪ್ಲೇ-ಆಫ್‌ ಮತ್ತು ಫೈನಲ್‌ನ ಸ್ಥಳಗಳು ಇನ್ನೂ ಘೋಷಣೆಯಾಗಬೇಕಿದೆ.

ಪ್ರತಿದಿನ ಎರಡು ಪಂದ್ಯಗಳು ರಾತ್ರಿ 8 ಮತ್ತು 9 ಗಂಟೆಗೆ ನಡೆಯಲಿದ್ದು, ಅಕ್ಟೋಬರ್ 15ರಿಂದ ಲೀಗ್‌ ಹಂತದ ಕೊನೆಯವರೆಗೆ ದಿನಕ್ಕೆ ಮೂರು ಪಂದ್ಯಗಳು ಇರಲಿವೆ.

ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಈ ವರ್ಷ ಹೊಸ ಆಟಗಾರರ ತಂಡದೊಂದಿಗೆ ಕಣಕ್ಕಿಳಿಯಲಿದೆ. ಕನ್ನಡಿಗ ಕೋಚ್ ಬಿ.ಸಿ. ರಮೇಶ್‌ ನೇತೃತ್ವದಲ್ಲಿ, ತಂಡವು ಕಳೆದ ಎರಡು ತಿಂಗಳಿಂದ ವಿಶೇಷ ತರಬೇತಿಯಲ್ಲಿ ಸಿದ್ಧತೆ ನಡೆಸಿದೆ. ತಂಡದ ನಾಯಕತ್ವವನ್ನು ಅಂಕುಶ್ ಠಾಠಿ ವಹಿಸಿದ್ದಾರೆ. ಆಗಸ್ಟ್ 29ರಂದು ರಾತ್ರಿ 9 ಗಂಟೆಗೆ ಪುಣೇರಿ ಪಲ್ಟನ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.

ತೆಲುಗು ಟೈಟಾನ್ಸ್, ತಮಿಳ್ ತಲೈವಾಸ್, ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್, ಯುಪಿ ಯೋಧಾಸ್, ಯು ಮುಂಬಾ, ಗುಜರಾತ್ ಜೈಂಟ್ಸ್, ಬಂಗಾಳ ವಾರಿಯರ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಮತ್ತು ಡಬಾಂಗ್ ದೆಹಲಿ. ಅಸ್ಲಾಂ ಇನಾಮದಾರ್, ಪವನ್ ಸೆಹ್ರಾವತ್, ಮೊಹಮ್ಮದ್ರೆಜಾ ಶಾದ್ಲುಯಿ, ಮತ್ತು ನವೀನ್ ಕುಮಾರ್ ರಂತಹ ಸ್ಟಾರ್ ಆಟಗಾರರ ಪ್ರದರ್ಶನವು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ (ಪ್ರಾದೇಶಿಕ ಭಾಷೆಗಳಲ್ಲಿ ಸಹ) ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದು. ಟಿಕೆಟ್‌ಗಳನ್ನು ಖರೀದಿಸಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸುವ ಅವಕಾಶವೂ ಇದೆ.

Exit mobile version