ನೀವು ಮ್ಯಾಕ್ಸ್‌ವೆಲ್‌ರನ್ನು ಮದುವೆಯಾಗಿಲ್ಲ ಅಂತ ಚೆನ್ನಾಗಿ ಆಡ್ತಿಲ್ಲ ಎಂದಿದ್ದ ನೆಟ್ಟಿಗನಿಗೆ ಪ್ರೀತಿ ಝಿಂಟಾ ಕ್ಲಾಸ್

ಪ್ರೀತಿ ಝಿಂಟಾ ತಿರುಗೇಟು: ಮ್ಯಾಕ್ಸ್‌ವೆಲ್ ಮದುವೆ ಕಾಮೆಂಟ್‌ಗೆ ಕ್ಲಾಸ್!

Befunky collage 2025 05 14t122832.773

ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ಐಪಿಎಲ್ ತಂಡದ ಸಹ-ಮಾಲೀಕರಾದ ಪ್ರೀತಿ ಝಿಂಟಾ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕಾಮೆಂಟ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಎಕ್ಸ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ಸೆಷನ್‌ನಲ್ಲಿ ಭಾಗವಹಿಸಿದ್ದ ಪ್ರೀತಿ, ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಸಂಬಂಧಿಸಿದ ಅನುಚಿತ ಕಾಮೆಂಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರೊಬ್ಬರ ಕಾಲೆಳೆಯುವ ಕಾಮೆಂಟ್‌ಗೆ ಕೆರಳಿದ ನಟಿ, ಎಕ್ಸ್‌ನಲ್ಲಿ ಸ್ಪಷ್ಟನೆ ನೀಡುವ ಮೂಲಕ ತಾರತಮ್ಯದ ವಿರುದ್ಧ ಧ್ವನಿಯೆತ್ತಿದ್ದಾರೆ.

ಪ್ರೀತಿ ಝಿಂಟಾ ಎಕ್ಸ್‌ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಸೆಷನ್‌ ಆಯೋಜಿಸಿದ್ದರು. ಈ ವೇಳೆ ಒಬ್ಬ ನೆಟ್ಟಿಗ, “ಪ್ರೀತಿ, ಮ್ಯಾಕ್ಸ್‌ವೆಲ್‌ನ ಕಳಪೆ ಪ್ರದರ್ಶನದಿಂದಾಗಿ ನೀವು ಅವರನ್ನು ಮದುವೆಯಾಗುತ್ತಿಲ್ಲವೇ?” ಎಂದು ಕಾಲೆಳೆದಿದ್ದರು. ಮತ್ತೊಬ್ಬರು, “ಮೇಡಂ, ನೀವು ಮ್ಯಾಕ್ಸ್‌ವೆಲ್‌ರನ್ನು ಮದುವೆಯಾಗಿಲ್ಲ, ಹಾಗಾಗಿ ಅವರು ನಿಮ್ಮ ತಂಡದಲ್ಲಿ ಚೆನ್ನಾಗಿ ಆಡುತ್ತಿಲ್ಲ,” ಎಂದು ಕಾಮೆಂಟ್ ಮಾಡಿದ್ದರು. ಈ ಅನಗತ್ಯ ಕಾಮೆಂಟ್‌ಗಳಿಂದ ಬೇಸರಗೊಂಡ ಪ್ರೀತಿ, ನೆಟ್ಟಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.

“ನೀವು ಎಲ್ಲಾ ಫ್ರಾಂಚೈಸಿ ಮಾಲೀಕರಿಗೂ ಇಂತಹ ಪ್ರಶ್ನೆಗಳನ್ನು ಕೇಳುತ್ತೀರಾ? ಅಥವಾ ಇದು ಮಹಿಳೆಯರಿಗೆ ಮಾತ್ರ ಮಾಡುವ ತಾರತಮ್ಯವೇ? ಕ್ರಿಕೆಟ್ ಫ್ರಾಂಚೈಸಿಗೆ ಬರುವವರೆಗೆ ಕಾರ್ಪೊರೇಟ್ ಜಗತ್ತಿನಲ್ಲಿ ಮಹಿಳೆಯರಿಗೆ ಎದುರಾಗುವ ಸವಾಲುಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಇದನ್ನು ಹಾಸ್ಯವೆಂದು ಕೇಳಿರಬಹುದು, ಆದರೆ ನೀವೇ ಒಮ್ಮೆ ಯೋಚಿಸಿ, ಇಂತಹ ಕಾಮೆಂಟ್‌ಗಳು ಎಷ್ಟು ಅಗೌರವಕರ ಎಂದು. ಕಳೆದ 18 ವರ್ಷಗಳಿಂದ ಶ್ರಮಪಟ್ಟು, ಒಂದೊಂದೇ ಹಂತವನ್ನು ದಾಟಿ ಈ ಸ್ಥಾನಕ್ಕೆ ಬಂದಿದ್ದೇನೆ. ಈ ರೀತಿಯ ತಾರತಮ್ಯ ಮತ್ತು ಅಗೌರವದ ಹೇಳಿಕೆಗಳನ್ನು ಇಲ್ಲಿಗೆ ನಿಲ್ಲಿಸಿ,” ಎಂದು ಪ್ರೀತಿ ಝಿಂಟಾ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

   ಪ್ರೀತಿ ಝಿಂಟಾ 2016ರಲ್ಲಿ ಜೀನ್ ಗುಡ್‌ಇನಫ್‌ರನ್ನು ಮದುವೆಯಾಗಿ, ಪ್ರಸ್ತುತ ವಿದೇಶದಲ್ಲಿ ನೆಲೆಸಿದ್ದಾರೆ. ಐಪಿಎಲ್ ಸೀಸನ್‌ನ ಸಂದರ್ಭದಲ್ಲಿ ಮಾತ್ರ ಭಾರತಕ್ಕೆ ಆಗಮಿಸುವ ಅವರು, ಪಂಜಾಬ್ ಕಿಂಗ್ಸ್ ತಂಡದ ಸಕ್ರಿಯ ಸಹ-ಮಾಲೀಕರಾಗಿದ್ದಾರೆ. 2008ರಿಂದ ತಂಡದ ಜೊತೆಗಿರುವ ಪ್ರೀತಿ, ಕ್ರಿಕೆಟ್ ಫ್ರಾಂಚೈಸಿಯಲ್ಲಿ ಮಹಿಳೆಯಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಆದರೆ, ಈ ರೀತಿಯ ಅನಗತ್ಯ ಕಾಮೆಂಟ್‌ಗಳು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುವಂತಿವೆ.

ಗ್ಲೆನ್ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ, 2012ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮತ್ತು ಪಂಜಾಬ್ ಕಿಂಗ್ಸ್‌ನಂತಹ ತಂಡಗಳಲ್ಲಿ ಆಡಿರುವ ಅವರು, 2013-2016ರ ಅವಧಿಯಲ್ಲಿ ಪಂಜಾಬ್ ಕಿಂಗ್ಸ್‌ಗೆ ಭರ್ಜರಿ ಪ್ರದರ್ಶನ ನೀಡಿದ್ದರು. ಆದರೆ, 2017ರಲ್ಲಿ ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಕೈಬಿಡಲ್ಪಟ್ಟಿದ್ದರು.

2021ರಿಂದ ಆರ್‌ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮ್ಯಾಕ್ಸ್‌ವೆಲ್‌ರನ್ನು 2025ರ ಐಪಿಎಲ್‌ಗಾಗಿ ಪಂಜಾಬ್ ಕಿಂಗ್ಸ್ ಮತ್ತೆ ಖರೀದಿಸಿತು. ಆದರೆ, ಈ ಸೀಸನ್‌ನಲ್ಲಿ ಅವರ ನಿರಾಸೆಯ ಪ್ರದರ್ಶನದಿಂದ ತಂಡವು ಅವರನ್ನು ಪ್ಲೇಯಿಂಗ್-11ರಿಂದ ಕೈಬಿಟ್ಟಿದೆ.

Exit mobile version