ಸ್ಮೃತಿ ಮಂಧಾನ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಪಲಾಶ್ ಮುಚ್ಚಲ್

BeFunky collage (64)

ಭಾರತ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಮದುವೆ ರದ್ದಾದ ವಿಚಾರ ಇದೀಗ ಹೊಸ ತಿರುವು ಪಡೆದಿದೆ. ಕಳೆದ ಡಿಸೆಂಬರ್‌ನಲ್ಲಿ ಇಬ್ಬರೂ ಮದುವೆ ರದ್ದಾಗಿರುವ ಬಗ್ಗೆ ತಿಳಿಸಿದ್ದರು ಆದರೆ ಕಾರಣವನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಇತ್ತೀಚೆಗೆ ಮರಾಠಿ ನಟ ಮತ್ತು ನಿರ್ಮಾಪಕ ವಿದ್ಯಾನ್ ಮಾನೆ ಅವರು ಸ್ಫೋಟಕ ಹೇಳಿಕೆ ನೀಡಿದ್ದರು. ಪಲಾಶ್ ಅವರ ನಡವಳಿಕೆಯೇ ಮದುವೆ ರದ್ದಿಗೆ ಕಾರಣ ಎಂದು.

ವಿದ್ಯಾನ್ ಮಾನೆ ಅವರು ಸ್ಮೃತಿ ಮಂಧಾನ ಅವರ ಬಾಲ್ಯದ ಸ್ನೇಹಿತರಾಗಿದ್ದು, ಮದುವೆ ಸಮಾರಂಭದಲ್ಲಿ ಹಾಜರಿದ್ದರು. ಅವರ ಪ್ರಕಾರ, ಮದುವೆಯ ಸಂದರ್ಭದಲ್ಲಿ ಪಲಾಶ್ ಮುಚ್ಚಲ್ ಒಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಇದು ಭಯಾನಕ ದೃಶ್ಯವಾಗಿತ್ತು ಎಂದು ಹೇಳಿದ್ದಾರೆ. ಇದರಿಂದ ಪರಿಸ್ಥಿತಿ ಉದ್ವಿಗ್ನವಾಗಿ, ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಪಲಾಶ್ ಅವರನ್ನು ಥಳಿಸಿದರು ಎಂದು ಆರೋಪಿಸಿದ್ದಾರೆ. ಇದಾದ ನಂತರ ಮದುವೆ ಮುರಿದುಬಿದ್ದಿತು ಎಂದು ಅವರು ಹೇಳಿದ್ದಾರೆ.

ವಂಚನೆ ಆರೋಪ: 40 ಲಕ್ಷ ರೂ. ಹೂಡಿಕೆ

ವಿದ್ಯಾನ್ ಮಾನೆ ಅವರು ಇನ್ನೊಂದು ಗಂಭೀರ ಆರೋಪ ಮಾಡಿದ್ದಾರೆ. ಪಲಾಶ್ ಸಿನಿಮಾ ನಿರ್ಮಾಣದ ಹೆಸರಿನಲ್ಲಿ ತಮ್ಮಿಂದ 40 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. ಸ್ಮೃತಿ ಮಂಧಾನ ಕುಟುಂಬದ ಮೂಲಕ ಪರಿಚಯವಾದ ನಂತರ ಪಲಾಶ್ ಸಿನಿಮಾ ನಿರ್ದೇಶನದ ಬಗ್ಗೆ ಮಾತನಾಡಿ, ಆರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಮದುವೆ ರದ್ದಾದ ನಂತರ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ದೂರು ನೀಡಿದ್ದಾರೆ. ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

10 ಕೋಟಿ ಮಾನನಷ್ಟ ಮೊಕದ್ದಮೆ:

ಈ ಆರೋಪಗಳಿಗೆ ತೀವ್ರ ಪ್ರತಿಕ್ರಿಯಿಸಿರುವ ಪಲಾಶ್ ಮುಚ್ಚಲ್, ಎಲ್ಲವನ್ನೂ ಸುಳ್ಳು ಮತ್ತು ಆಧಾರರಹಿತ ಎಂದು ನಿರಾಕರಿಸಿದ್ದಾರೆ. ತಮ್ಮ ಖ್ಯಾತಿ ಮತ್ತು ವೈಯಕ್ತಿಕ ಜೀವನಕ್ಕೆ ಕಳಂಕ ತರುವ ಪಿತೂರಿ ಎಂದು ಹೇಳಿದ್ದಾರೆ. ತಮ್ಮ ವಕೀಲ ಶ್ರೇಯಂಶ್ ಮಿಥಾರೆ ಮೂಲಕ ವಿದ್ಯಾನ್ ಮಾನೆ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದಾರೆ. ಇದಲ್ಲದೆ ಸ್ಮೃತಿ ಮಂಧಾನ ಅವರೊಂದಿಗಿನ ಎಲ್ಲಾ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಿಂದ ತೆಗೆದುಹಾಕಿದ್ದಾರೆ.

ಈ ವಿವಾದವು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸ್ಮೃತಿ ಮಂಧಾನ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕೇಸ್ ಮುಂದುವರಿದರೆ ಹೊಸ ತಿರುವುಗಳು ಬರಬಹುದು.

Exit mobile version