ಬೆಂಗಳೂರು: ಭಾರತದ ಒಲಿಂಪಿಕ್ ಹೀರೋ, ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ (Neeraj Chopra) ಅವರು ತಮ್ಮ ವೃತ್ತಿಜೀವನದ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಘೋಷಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ತಮ್ಮನ್ನು ಬೆಂಬಲಿಸುತ್ತಾ ಬಂದಿದ್ದ ಜೆಎಸ್‌ಡಬ್ಲ್ಯು (JSW Sports) ಸ್ಪೋರ್ಟ್ಸ್ ಸಂಸ್ಥೆಯೊಂದಿಗಿನ ಅಧಿಕೃತ ಪಾಲುದಾರಿಕೆಯನ್ನು ಅಂತ್ಯಗೊಳಿಸುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. ಆದರೆ ಇದು ಕೇವಲ ಅಂತ್ಯವಲ್ಲ, ಬದಲಿಗೆ ನೀರಜ್ ಅವರು ತಮ್ಮದೇ ಆದ ಕ್ರೀಡಾಪಟು ನಿರ್ವಹಣಾ ಸಂಸ್ಥೆ ‘ವೆಲ್ ಸ್ಪೋರ್ಟ್ಸ್’ (Well Sports) ಅನ್ನು ಪ್ರಾರಂಭಿಸುವುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ನೀರಜ್ ಚೋಪ್ರಾ ಮತ್ತು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ನಡುವಿನ ಸಂಬಂಧ 2016ರಲ್ಲಿ ಆರಂಭವಾಗಿತ್ತು. ಆಗಿನ್ನೂ ಉದಯೋನ್ಮುಖ ತಾರೆಯಾಗಿದ್ದ ನೀರಜ್ ಅವರ ಪ್ರತಿಭೆಯನ್ನು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಎಕ್ಸಲೆನ್ಸ್ ಪ್ರೋಗ್ರಾಂ (SEP) ಅಡಿಯಲ್ಲಿ ಗುರುತಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ನೀರಜ್ ಗಳಿಸಿದ ಪ್ರತಿಯೊಂದು ಯಶಸ್ಸಿನಲ್ಲೂ ಈ ಸಂಸ್ಥೆ ಅವರನ್ನು ಬೆಂಬಲಿಸುತ್ತಾ ಬಂದಿದೆ.
ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಸಿಇಒ ದಿವ್ಯಾಂಶು ಸಿಂಗ್ ಈ ಬಗ್ಗೆ ಮಾತನಾಡಿ, ನೀರಜ್ ಅವರಂತಹ ಸಾಧಕನೊಂದಿಗೆ ಕೆಲಸ ಮಾಡುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ. ಅವರು ಕೇವಲ ಅಥ್ಲೀಟ್ ಮಾತ್ರವಲ್ಲ, ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ. ಅವರ ಮುಂದಿನ ಉದ್ಯಮಶೀಲ ಪ್ರಯತ್ನಗಳಿಗೆ ನಮ್ಮ ಸಂಪೂರ್ಣ ಬೆಂಬಲ ಮತ್ತು ಹಾರ್ದಿಕ ಶುಭಾಶಯಗಳಿವೆ ಎಂದು ತಿಳಿಸಿದರು.
ಇತಿಹಾಸ ಸೃಷ್ಟಿಸಿದ ‘ಗೋಲ್ಡನ್ ಬಾಯ್’
ನೀರಜ್ ಚೋಪ್ರಾ ಭಾರತೀಯ ಕ್ರೀಡಾ ಇತಿಹಾಸದ ಪುಟಗಳಲ್ಲಿ ಅಜರಾಮರ ಸ್ಥಾನ ಪಡೆದಿದ್ದಾರೆ. ಅವರು ಸಾಧಿಸಿದ ಕೆಲವು ಮೈಲಿಗಲ್ಲುಗಳನ್ನ ನೋಡುವುದಾದರೆ,
-
ಟೋಕಿಯೋ 2020 ಒಲಿಂಪಿಕ್ಸ್: ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ.
-
2023 ವಿಶ್ವ ಚಾಂಪಿಯನ್ಶಿಪ್: ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನದ ಪದಕ.
-
2024 ಪ್ಯಾರಿಸ್ ಒಲಿಂಪಿಕ್ಸ್: ಸತತ ಎರಡನೇ ಬಾರಿಗೆ ಒಲಿಂಪಿಕ್ ವೇದಿಕೆಯಲ್ಲಿ ಬೆಳ್ಳಿ ಪದಕದ ಸಾಧನೆ.
ಏನಿದು ‘ವೆಲ್ ಸ್ಪೋರ್ಟ್ಸ್’ ?
ನೀರಜ್ ಇದೀಗ ಅಥ್ಲೀಟ್ ಆಗಿ ಮಾತ್ರವಲ್ಲದೆ ಉದ್ಯಮಿಯಾಗಿಯೂ ಕಾರ್ಯ ನಿರ್ವಹಿಸಲು ಸಜ್ಜಾಗಿದ್ದಾರೆ. ತಮ್ಮದೇ ಆದ ‘ವೆಲ್ ಸ್ಪೋರ್ಟ್ಸ್’ ಸಂಸ್ಥೆಯ ಮೂಲಕ ಮುಂದಿನ ಪೀಳಿಗೆಯ ಕ್ರೀಡಾಪಟುಗಳನ್ನು ನಿರ್ವಹಣೆ ಮಾಡುವ ಮತ್ತು ಅವರಿಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿದ್ದಾರೆ. ವಿಶೇಷವೆಂದರೆ, ಈ ಹೊಸ ಸಂಸ್ಥೆಯನ್ನು ರೂಪಿಸುವಲ್ಲಿ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಕೂಡ ನೀರಜ್ ಅವರಿಗೆ ನೆರವು ನೀಡಿದೆ.
ಈ ಕುರಿತು ನೀರಜ್ ಕೃತಜ್ಞತೆ ಸಲ್ಲಿಸುತ್ತಾ, ನನ್ನ ವೃತ್ತಿಜೀವನ ಶೂನ್ಯದಿಂದ ಆರಂಭವಾದಾಗ ಜೆಎಸ್‌ಡಬ್ಲ್ಯು ನನ್ನ ಬೆನ್ನಿಗೆ ನಿಂತಿತು. ನನ್ನ ದೃಷ್ಟಿಕೋನಕ್ಕೆ ರೆಕ್ಕೆ ನೀಡಿದ ಅವರಿಗೆ ನಾನು ಸದಾ ಋಣಿ. ಈಗ ಸ್ವಂತ ಸಂಸ್ಥೆಯ ಮೂಲಕ ಹೊಸ ಹಾದಿಯಲ್ಲಿ ಸಾಗಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
