ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಹಾಗೂ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತೆ ಮೈದಾನಕ್ಕೆ ಮರಳಿದ್ದಾರೆ. ಖತಾರ್‌ನ ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಮೂಲಕ ಸುಮಾರು 9 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರೀಡೆಗೆ ಕಂಬ್ಯಾಕ್ ಮಾಡಿದ ನೀರಜ್, ತಮ್ಮ ಮೊದಲ ಪಂದ್ಯದಲ್ಲೇ ವೀಕ್ಷಕರ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ.
9 ತಿಂಗಳ ಬಳಿಕ ಸ್ಪರ್ಧೆಗೆ ಮರಳಿದ ನೀರಜ್ ಚೋಪ್ರಾ
ದೋಹಾ ಡೈಮಂಡ್ ಲೀಗ್‌ನಲ್ಲಿ 85.69 ಮೀಟರ್ ಎಸೆದು 4ನೇ ಸ್ಥಾನ
2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದ ಚೋಪ್ರಾ
AFI ನಿಗದಿಪಡಿಸಿದ 82.61 ಮೀಟರ್ ಗುರಿ ಮೀರಿ ಸಾಧನೆ ಮಾಡಿದ ನೀರಜ್
ದೋಹಾ ಡೈಮಂಡ್ ಲೀಗ್‌ನಲ್ಲಿ ನಾಲ್ಕನೇ ಸ್ಥಾನ
ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡ ಕಾರಣ ಕಳೆದ ಹಲವು ತಿಂಗಳುಗಳಿಂದ ಸ್ಪರ್ಧೆಗಳಿಂದ ದೂರ ಉಳಿದಿದ್ದ ನೀರಜ್ ಚೋಪ್ರಾ, ದೋಹಾ ಡೈಮಂಡ್ ಲೀಗ್‌ನಲ್ಲಿ 85.69 ಮೀಟರ್ ದೂರಕ್ಕೆ ಭರ್ಜಿ ಎಸೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆರಂಭಿಕ ಹಂತದಲ್ಲಿ ಸವಾಲು ಎದುರಾದರೂ, ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ನೀರಜ್.
ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಚೋಪ್ರಾ ಅರ್ಹತೆ
ನೀರಜ್ ಅವರ ಈ ಪ್ರದರ್ಶನದ ವಿಶೇಷವೆಂದರೆ, ಅವರು 2026ರ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ನಿಗದಿಪಡಿಸಿದ್ದ 82.61 ಮೀಟರ್ ಅರ್ಹತಾ ಗುರಿಯನ್ನು ನೀರಜ್ ಸುಲಭವಾಗಿ ದಾಟಿದರು ಹಾಗಾಗಿ ಚೋಪ್ರಾ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ಸ್ಪರ್ಧೆಯ ವೇಳೆ ನೀರಜ್ ಅವರ ಮೊದಲ ಎಸೆತ ಫೌಲ್ ಆಗಿತ್ತು. ಎರಡನೇ ಪ್ರಯತ್ನದಲ್ಲಿ 82.77 ಮೀಟರ್ ದೂರಕ್ಕೆ ಎಸೆದ ಅವರು, ಮೂರನೇ ಪ್ರಯತ್ನದಲ್ಲಿ 85.69 ಮೀಟರ್ ದಾಖಲಿಸಿ ತಮ್ಮ ಕಂಬ್ಯಾಕ್ ಅನ್ನು ಭರ್ಜರಿಯಾಗಿ ಘೋಷಿಸಿದರು. ನಾಲ್ಕನೇ ಎಸೆತದಲ್ಲಿ 83.45 ಮೀಟರ್ ಸಾಧನೆ ಮಾಡಿದರೆ, ಐದನೇ ಪ್ರಯತ್ನ ಮತ್ತೊಮ್ಮೆ ಫೌಲ್ ಆಯಿತು.
ಡೈಮಂಡ್ ಲೀಗ್ ನಿಯಮದ ಪ್ರಕಾರ, ಮೊದಲ ಐದು ಸುತ್ತುಗಳ ಬಳಿಕ ಅಂಕಪಟ್ಟಿಯಲ್ಲಿ ಅಗ್ರ ಮೂರು ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಮಾತ್ರ ಆರನೇ ಎಸೆತದ ಅವಕಾಶ ನೀಡಲಾಗುತ್ತದೆ. ನೀರಜ್ ನಾಲ್ಕನೇ ಸ್ಥಾನದಲ್ಲಿದ್ದ ಕಾರಣ ಅಂತಿಮ ಎಸೆತಕ್ಕೆ ಅವಕಾಶ ಸಿಗಲಿಲ್ಲ.
ದೋಹಾ ಡೈಮಂಡ್ ಲೀಗ್ ಟಾಪ್ 4 ಯಾರು?
ದೋಹಾ ಡೈಮಂಡ್ ಲೀಗ್‌ನಲ್ಲಿ ಶ್ರೀಲಂಕಾದ ರುಮೇಶ್ ಪತಿರಾಗೆ 88.68 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು. ಗ್ರೆನಡಾದ ಆಂಡರ್ಸನ್ ಪೀಟರ್ಸ್ 86.38 ಮೀಟರ್‌ನೊಂದಿಗೆ ಬೆಳ್ಳಿ ತಮ್ಮದಾಗಿಸಿಕೊಂಡರು. ಅಂತೆಯೇ ಅಮೆರಿಕದ ಕರ್ಟಿಸ್ ಥಾಂಪ್ಸನ್ 85.99 ಮೀಟರ್‌ನೊಂದಿಗೆ ಕಂಚಿನ ಪದಕ ಪಡೆದರು. ನೀರಜ್ ಚೋಪ್ರಾ 85.69 ಮೀಟರ್ ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದರು.
ದೀರ್ಘ ಕಾಲದ ವಿರಾಮದ ಬಳಿಕ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ನೀಡಿದ ಈ ಅತ್ಯುತ್ತಮ ಪ್ರದರ್ಶನ ಭಾರತೀಯ ಕ್ರೀಡಾಭಿಮಾನಿಗಳಿಗೆ ಹೊಸ ಭರವಸೆ ಮೂಡಿಸಿದೆ.
