IPL 2026: ಮುಂಬೈ ವಿರುದ್ಧ ಕೆಕೆಆರ್‌ ಸ್ಫೋಟಕ ಆರಂಭ

Untitled design 2026 03 29T195611.990

ಮುಂಬೈ, ಮಾ.29: ಐಪಿಎಲ್‌ನ ಭಾನುವಾರದ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದೆ. ನಾಯಕ ಹಾರ್ದಿಕ್ ಪಾಂಡ್ಯ ಈ ನಿರ್ಧಾರ ಕೈಗೊಂಡಿದ್ದು, ಟಾಸ್ ಸೋತ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಭರ್ಜರಿ ರನ್ ಮಳೆಯ ಭರವಸೆ ಮೂಡಿಸಿದೆ.

ವಾಂಖೆಡೆ ಪಿಚ್ ಎಂದರೆ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಸಣ್ಣ ಬೌಂಡರಿಗಳು, ವೇಗದ ಔಟ್‌ಫೀಲ್ಡ್ ಮತ್ತು ಸಮತಟ್ಟಾದ ಪಿಚ್ ಕಾರಣದಿಂದ ಇಲ್ಲಿ ದೊಡ್ಡ ಮೊತ್ತಗಳೂ ಸುರಕ್ಷಿತವಾಗಿರುವುದಿಲ್ಲ. ಚೇಸಿಂಗ್ ಮಾಡುವುದು ಸಹ ಸುಲಭವಾಗಿರುವುದರಿಂದ ಟಾಸ್ ಗೆದ್ದ ತಂಡಗಳು ಹೆಚ್ಚಾಗಿ ಬೌಲಿಂಗ್ ಆಯ್ಕೆ ಮಾಡುತ್ತವೆ.

ಇತ್ತೀಚೆಗೆ ಇದೇ ಪಿಚ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟಾರೆ 499 ರನ್ ಗಳಿಸಿ ದಾಖಲೆ ನಿರ್ಮಿಸಿದ್ದವು. ಈ ಹಿನ್ನೆಲೆ ಇಂದಿನ ಪಂದ್ಯದಲ್ಲೂ ರನ್ ಮಳೆ ಖಚಿತ ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಯನ್ನು ಹೊಂದಿದೆ. ಅನುಭವಿಗಳಾದ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿ ಇದ್ದು ತಂಡಕ್ಕೆ ಬಲ ತುಂಬುತ್ತಿದ್ದಾರೆ. ಟಿ20 ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರರಾದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ತಂಡದ ಮಧ್ಯ ಕ್ರಮವನ್ನು ಬಲಪಡಿಸುತ್ತಾರೆ. ತಿಲಕ್ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಪ್ರಮುಖ ಪಾತ್ರವಹಿಸಲಿದ್ದಾರೆ.

ಇನ್ನೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವೂ ಸಮಬಲದ ಸವಾಲು ನೀಡುತ್ತಿದ್ದು, ನಾಯಕ ಅಜಿಂಕ್ಯ ರಹಾನೆ ಅವರ ಅನುಭವ ತಂಡಕ್ಕೆ ಬೆಂಬಲವಾಗಲಿದೆ. ರಿಂಕು ಸಿಂಗ್ ಅಂತಿಮ ಓವರ್‌ಗಳಲ್ಲಿ ಸ್ಫೋಟಕ ಆಟದ ಮೂಲಕ ಪಂದ್ಯವನ್ನು ತಿರುಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಜೊತೆಗೆ ಸುನಿಲ್ ನರೈನ್ ಅವರ ಆಲ್‌ರೌಂಡ್ ಪ್ರದರ್ಶನ ಹಾಗೂ ವರುಣ್ ಚಕ್ರವರ್ತಿ ಅವರ ಸ್ಪಿನ್ ಮಂತ್ರ ಮುಂಬೈ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಬಹುದು.

ಯುವ ಆಟಗಾರ ಅಂಗ್ಕ್ರಿಶ್ ರಘುವಂಶಿ ಕೂಡ ಗಮನ ಸೆಳೆಯುವ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲಿ ವೈಭವ್ ಅರೋರಾ ಮತ್ತು ಮುಜರಬಾನಿ ತಂಡದ ಪ್ರಮುಖ ಆಯ್ಕೆಗಳಾಗಿದ್ದಾರೆ.

Exit mobile version