ಐಪಿಎಲ್ 2025: ಲಕ್ನೋ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಮುಂಬೈ

Untitled design (100)

ಮಿಚೆಲ್ ಮಾರ್ಷ್, ನಿಕೊಲಸ್ ಪೂರನ್ ಮತ್ತು ನಾಯಕ ರಿಷಭ್ ಪಂತ್‌ ಅವರಂತ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು 54 ರನ್‌ಗಳ ಅಂತದಿಂದ ಸೋಲು ಕಂಡಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್‌ನ ಡಬಲ್ ಹೆಡರ್ ಮೊದಲ ಪಂದ್ಯದಲ್ಲಿ ಲಕ್ನೋ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರಿಂದ ಮುಂಬೈ ತವರಿನಲ್ಲಿ ಬ್ಯಾಟಿಂಗ್ ಆರಂಭಿಸಿ ಭರ್ಜರಿ ಮೊತ್ತ ಕಲೆ ಹಾಕಿತ್ತು.

ಮುಂಬೈ ಆರಂಭಿಕರಾದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಮೈದಾನಕ್ಕಿಳಿದರು. ರೋಹಿತ್ ಕೇವಲ 12 ರನ್‌ಗೆ ಔಟ್ ಆದರೂ, ರಿಕೆಲ್ಟನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 32 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 58 ರನ್ ಗಳಿಸಿದ ರಿಕೆಲ್ಟನ್ ತಂಡಕ್ಕೆ ಬಲ ನೀಡಿದರು. ಅವರ ಜತೆಗೆ ವಿಲ್ ಜಾಕ್ಸ್ 29 ರನ್ ಕೊಡುಗೆ ನೀಡಿದರು.

ಸೂರ್ಯಕುಮಾರ್ ಯಾದವ್ ತಮ್ಮ ಚಿರಪರಿಚಿತ ಶೈಲಿಯಲ್ಲಿ ಕೇವಲ 28 ಎಸೆತಗಳಲ್ಲಿ 54 ರನ್ ಬಾರಿಸಿದರು. ಅವರ ಬ್ಯಾಟಿಂಗ್ 4 ಬೌಂಡರಿ ಹಾಗೂ 4 ಸಿಕ್ಸರ್ ಗಳಿಂದ ಮನರಂಜಿಸಿತು. ನಾಯಕ ಹಾರ್ದಿಕ್ ಪಾಂಡ್ಯ (5 ರನ್), ತಿಲಕ್ ವರ್ಮಾ (5 ರನ್) ಬೃಹತ್ ಕೊಡುಗೆ ನೀಡಲಾರದೆ ಔಟಾದರೂ, ಆಕರ್ಷಕವಾಗಿ ಆಡಿದ ಬೋಷ್ (20 ರನ್) ಮತ್ತು ನಮನ್ ಧೀರ್ (ಅಜೇಯ 25 ರನ್) ತಂಡದ ಮೊತ್ತ ಹೆಚ್ಚಿಸಿದರು.

ಅಂತಿಮವಾಗಿ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ ಲಕ್ನೋಗೆ ಬೃಹತ್ ಗುರಿ ನೀಡಿತ್ತು. ಲಕ್ನೋ ಬ್ಯಾಟಿಂಗ್ ಆರಂಭದಿಂದಲೇ ಹಿಂಜರಿಯಿತು. ಮಿಚೆಲ್ ಮಾರ್ಷ್ 34 ರನ್ ಮಾಡಿ ಔಟಾದರು. ಮಾರ್ಕಮ್ ಕೇವಲ 9 ರನ್ ಗಳಿಸಿದರು. ನಿಕೊಲಸ್ ಪೂರನ್ ಶರತಾಲಾದ ಬ್ಯಾಟಿಂಗ್ ಮಾಡಿ 27 ರನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ರಿಷಭ್ ಪಂತ್ ಕೇವಲ 4 ರನ್ ಗೆ ಔಟಾಗಿ ನಿರಾಸೆ ತಂದರು.

ಆಯುಷ್ ಬದೋನಿ (35 ರನ್) ಮತ್ತು ಡೇವಿಡ್ ಮಿಲ್ಲರ್ (24 ರನ್) ಕೆಲ ಕಾಲ ಮುನ್ನಡೆದರೂ, ಮುಂಬೈ ಬೌಲರ್‌ಗಳ ಆಕ್ರಮಣ ತಡೆದಿರಲಿಲ್ಲ. ಇತರ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಾರದೆ ಲಕ್ನೋ ತಂಡ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 161 ರನ್‌ಗಳಿಗೆ ಕುಸಿದು ಸೋಲನ್ನು ಒಪ್ಪಿಕೊಂಡಿತು.

ಮುಂಬೈ ಪರ ಬೌಲರ್‌ಗಳು ಚುರುಕಾಗಿ ಬೌಲಿಂಗ್ ಮಾಡಿದ್ದಾರೆ. ಈ ಗೆಲುವಿನಿಂದ ಮುಂಬೈ ಇಂಡಿಯನ್ಸ್ 10 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ಪಾಂಡ್ಯ ನೇತೃತ್ವದ ತಂಡ ಸತತ 5ನೇ ಪಂದ್ಯದಲ್ಲೂ ಜಯಭೇರಿ ಬಾರಿಸಿದ್ದು, ಅವರ ಶಿಬಿರದಲ್ಲಿ ವಿಜಯೋತ್ಸವದ ವಾತಾವರಣ ಮನೆಮಾಡಿದೆ.

Exit mobile version