ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ GOAT ಇಂಡಿಯಾ ಟೂರ್ 2025ರ ಮೊದಲ ದಿನವೇ ದೊಡ್ಡ ಟ್ವಿಸ್ಟ್ ತೆಗೆದುಕೊಂಡಿದೆ. ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಮೆಸ್ಸಿ ಅವರ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಮುಗಿಬಿದ್ದರು. ಆದರೆ ಕೇವಲ 10 ನಿಮಿಷಗಳ ಕಾಲ ಮಾತ್ರ ಮೆಸ್ಸಿ ಕಾಣಿಸಿಕೊಂಡರು. ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಮೆಸ್ಸಿಯನ್ನು ಸುತ್ತುವರಿದಿದ್ದರಿಂದ ಸಾಮಾನ್ಯ ಅಭಿಮಾನಿಗಳಿಗೆ ಅವರ ಮುಖವೇ ಕಾಣಲಿಲ್ಲ. ಇದರಿಂದ ಕೋಪಗೊಂಡ ಫ್ಯಾನ್ಸ್ ಬಾಟಲ್, ಕುರ್ಚಿಗಳನ್ನು ಎಸೆದು, ಬ್ಯಾನರ್‌ಗಳನ್ನು ಹರಿದು ಪುಂಡಾಟ ನಡೆಸಿದರು. ಪೊಲೀಸರು ಲಾಠಿ ಚಾರ್ಜ್ ಮಾಡಿ ಅಭಿಮಾನಿಗಳನ್ನು ಚದುರಿಸಿದರು.
ಮೆಸ್ಸಿ ಅವರು ಮಿಯಾಮಿಯಿಂದ ದುಬೈ ಮಾರ್ಗವಾಗಿ ರಾತ್ರಿ 1:30ಕ್ಕೆ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸಾವಿರಾರು ಫ್ಯಾನ್ಸ್ ಅರ್ಜೆಂಟೀನಾ ಫ್ಲ್ಯಾಗ್ ಹಿಡಿದು ಸ್ವಾಗತ ಕೋರಿದರು. ಬೆಳಗ್ಗೆ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆರಂಭವಾಯಿತು. ಮೆಸ್ಸಿ ಅವರು ಸ್ಟೇಡಿಯಂಗೆ ಬಂದು ಫ್ಯಾನ್ಸ್‌ಗೆ ವೇವ್ ಮಾಡಿದರು, ಮೊಹನ್ ಬಾಗನ್ ಜೆರ್ಸಿ ಸ್ವೀಕರಿಸಿದರು, 70 ಅಡಿ ತನ್ನ ವಿಗ್ರಹವನ್ನು ವರ್ಚುವಲ್ ಅನಾವರಣ ಮಾಡಿದರು. ಆದರೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮೆಸ್ಸಿಯನ್ನು ಸುತ್ತುವರಿದಿದ್ದರಿಂದ ಗ್ಯಾಲರಿಯಲ್ಲಿದ್ದ ಫ್ಯಾನ್ಸ್‌ಗೆ ಏನೂ ಕಾಣಲಿಲ್ಲ.
₹12,000 ಟಿಕೆಟ್ ತೆಗೆದುಕೊಂಡು ಬಂದೆವು, ಆದರೆ ಮೆಸ್ಸಿಯ ಮುಖವೇ ಕಾಣಲಿಲ್ಲ. ರಾಜಕಾರಣಿಗಳು ಮತ್ತು ನಟರು ಮಾತ್ರ ಸುತ್ತುವರಿದಿದ್ದರು” ಎಂದು ಒಬ್ಬ ಫ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಪಗೊಂಡ ಫ್ಯಾನ್ಸ್ ಬಾಟಲ್ ಎಸೆದು, ಕುರ್ಚಿಗಳನ್ನು ಒಡೆದು, ಬ್ಯಾರಿಕೇಡ್ ಒಡೆಯಲು ಪ್ರಯತ್ನಿಸಿದರು. ಸೆಕ್ಯುರಿಟಿ ಬ್ರೀಚ್ ಆಗುತ್ತಿದ್ದಂತೆ ಮೆಸ್ಸಿ ಅವರನ್ನು ತ್ವರಿತವಾಗಿ ಸ್ಟೇಡಿಯಂನಿಂದ ಹೊರಗೆ ಕರೆತಂದರು. ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದರು.
ಕೋಲ್ಕತ್ತಾ ಘಟನೆಯು ಆಯೋಜಕರ ಮ್ಯಾನೇಜ್‌ಮೆಂಟ್ ಕೊರತೆಯನ್ನು ಬಯಲುಮಾಡಿದೆ. ₹4,000 ರಿಂದ ₹12,000 ವರೆಗಿನ ಟಿಕೆಟ್ ಖರೀದಿಸಿದ ಫ್ಯಾನ್ಸ್ ನಿರಾಶೆಯಲ್ಲಿದ್ದಾರೆ. ಆದರೂ ಮೆಸ್ಸಿ ಭಾರತ ಭೇಟಿಯು ಫುಟ್ಬಾಲ್ ಪ್ರಿಯರಿಗೆ ಜೀವಂತ ಕನಸು ನನಸಾಗಿಸಿದೆ.
