ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ 65 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ನಿತೀಶ್ ಕುಮಾರ್ ರೆಡ್ಡಿ ಅವರ ಅದ್ಭುತ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ತನ್ನ ಎರಡನೇ ಪಂದ್ಯದಲ್ಲೇ ಮೊದಲ ಜಯವನ್ನು ಇಶಾನ್ ಕಿಶನ್ ಪಡೆ ತನ್ನದಾಗಿಸಿಕೊಂಡಿತು. ಇನ್ನು ಅಜಿಂಕ್ಯ ರಹಾನೆ ನೇತೃತ್ವದ KKR ಸತತ ಎರಡನೇ ಸೋಲನ್ನು ಅನುಭವಿಸಿತು.
SRH ಗೆ ಭರ್ಜರಿ ಆರಂಭ
ಗುರುವಾರ ಈಡನ್ ಗಾರ್ಡನ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ SRH ಗೆ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅಬ್ಬರದ ಆರಂಭ ತಂದುಕೊಟ್ಟರು. ಇವರಿಬ್ಬರೂ 5.4 ಓವರ್‌ಗಳಲ್ಲಿ 82 ರನ್ಗಳ ಜೊತೆಯಾಟವಾಡಿದರು. ಹೆಡ್ 21 ಎಸೆತಗಳಲ್ಲಿ 46 ರನ್ (6 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ, ಅಭಿಷೇಕ್ 21 ಎಸೆತಗಳಲ್ಲಿ 48 ರನ್ (4 ಬೌಂಡರಿ, 4 ಸಿಕ್ಸರ್) ಬಾರಿಸಿ ಅರ್ಧಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್ (35 ಎಸೆತಗಳಲ್ಲಿ 52 ರನ್) ಮತ್ತು ನಿತೀಶ್ ಕುಮಾರ್ ರೆಡ್ಡಿ (24 ಎಸೆತಗಳಲ್ಲಿ 39 ರನ್) ಅವರು 82 ರನ್ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು 200 ದಾಟಿಸಿದರು. ಅಂತಿಮವಾಗಿ SRH 20 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. KKR ಗೆ 227 ರನ್‌ಗಳ ಗುರಿ ನೀಡಲಾಯಿತು. KKR ಪರ ಬ್ಲೆಸಿಂಗ್ ಮುಜರಾಬಾನಿ 4 ವಿಕೆಟ್ ಪಡೆದರೆ, ವೈಭವ್ ಅರೋರಾ 2 ವಿಕೆಟ್ ಕಬಳಿಸಿದರು.
KKR ಆಕ್ರಮಣಕಾರಿ ಆರಂಭ, ಕೊನೆಯಲ್ಲಿ ಕುಸಿತ
227 ರನ್‌ಗಳ ಸವಾಲಿನ ಗುರಿ ಹಿಂಬಾಲಿಸಿದ KKR ಗೆ ಆರಂಭಿಕ ಫಿನ್ ಆಲೆನ್ ಕೇವಲ 7 ಎಸೆತಗಳಲ್ಲಿ 28 ರನ್ ಚಚ್ಚಿ ಉತ್ತಮ ಆರಂಭ ನೀಡಿದರು. ನಂತರ ಅಂಗ್ಕೃಷ್ ರಘುವಂಶಿ (29 ಎಸೆತಗಳಲ್ಲಿ 52 ರನ್, 6 ಬೌಂಡರಿ, 2 ಸಿಕ್ಸರ್) ತಮ್ಮ ಸತತ ಎರಡನೇ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿರಿಸಿದ್ದರು. ಆದರೆ ನಿರ್ಣಾಯಕ ಸಂದರ್ಭದಲ್ಲಿ ಕ್ಯಾಮೆರಾನ್ ಗ್ರೀನ್ ಮತ್ತು ರಘುವಂಶಿ ರನ್ಔಟ್ ಆದ ಪರಿಣಾಮ KKR ನಡುಗಿತು. ರಿಂಕು ಸಿಂಗ್ 25 ಎಸೆತಗಳಲ್ಲಿ 35 ರನ್ ಗಳಿಸಿದರೂ, ತಂಡ 16 ಓವರ್‌ಗಳಲ್ಲೇ 161 ರನ್ಗಳಿಗೆ ಆಲ್ಔಟ್ ಆಯಿತು. 65 ರನ್‌ಗಳ ಸೋಲು ಅನುಭವಿಸಿತು.
SRH ಪರ ಜಯದೇವ್ ಉನಾದ್ಕಟ್ 3 ವಿಕೆಟ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಎಹ್ಸಾನ್ ಮಾಲಿಂಗ ತಲಾ 2 ವಿಕೆಟ್ ಪಡೆದರು.
