ಮೊಹಾಲಿ: ದೇಶದ ಕ್ರೀಡಾ ಲೋಕವನ್ನು ಬೆಚ್ಚಿಬೀಳಿಸಿದ್ದ ಖ್ಯಾತ ಕಬಡ್ಡಿ ಪಟು ರಾಣಾ ಬಾಲಚೌರಿಯಾ (Rana Balachauria) ಹತ್ಯೆ ಪ್ರಕರಣ ಈಗ ಅಂತ್ಯ ಕಂಡಿದೆ. ಹತ್ಯೆ ನಡೆಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಹರ್ಪಿಂದರ್ ಅಲಿಯಾಸ್ ಮಿದ್ದು ಎಂಬಾತನನ್ನು ಮೊಹಾಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.
ಸೋಮವಾರ ಮೊಹಾಲಿಯಲ್ಲಿ ಅದ್ದೂರಿ ಕಬಡ್ಡಿ ಟೂರ್ನಿಯೊಂದನ್ನು ಆಯೋಜಿಸಲಾಗಿತ್ತು. ರಾಣಾ ಬಾಲಚೌರಿಯಾ ಅವರು ಕೇವಲ ಆಯೋಜಕರಲ್ಲದೆ, ತಂಡದ ನಾಯಕನಾಗಿ ಸ್ವತಃ ಕಬಡ್ಡಿ ಅಖಾಡಕ್ಕಿಳಿದಿದ್ದರು. ಪಂದ್ಯದ ಟಾಸ್ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿತ್ತು. ಎರಡೂ ತಂಡದ ಆಟಗಾರರು ವಾರ್ಮ್ ಅಪ್ ಮಾಡುತ್ತಿದ್ದರು. ಸಾವಿರಾರು ಕ್ರೀಡಾಭಿಮಾನಿಗಳು ಪಂದ್ಯ ವೀಕ್ಷಿಸಲು ಕುಳಿತಿದ್ದರು. ಇನ್ನೇನು ಪಂದ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ಏಕಾಏಕಿ ನುಗ್ಗಿದ ಹರ್ಪಿಂದರ್ ಹಾಗೂ ಆತನ ಸಹಚರರು ರಾಣಾ ಮೇಲೆ ಗುಂಡು ಹಾರಿಸಿ ದಾಳಿ ಮಾಡಿದ್ದಾರೆ.
ಹಲವು ಬಾರಿ ಗುಂಡುಗಳು ತಗುಲಿದ ಪರಿಣಾಮ ರಾಣಾ ಕಬಡ್ಡಿ ಅಂಕಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ಘಟನೆಯಿಂದ ಕ್ರೀಡಾಂಗಣದಲ್ಲಿ ಕಾಲ್ತುಳಿತ ಉಂಟಾಗಿ ಅಭಿಮಾನಿಗಳು ಭಯಭೀತರಾಗಿ ಓಡಿದ್ದರು.
ಹತ್ಯೆಯ ನಂತರ ಪಲಾಯನ ಮಾಡಿದ್ದ ಆರೋಪಿಗಳ ಪತ್ತೆಗಾಗಿ ಮೊಹಾಲಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕಬಡ್ಡಿ ಪಂದ್ಯದ ನೇರ ಪ್ರಸಾರವಾಗುತ್ತಿದ್ದ ವಿಡಿಯೋಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಯಿತು. ತನಿಖೆಯ ವೇಳೆ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಹರ್ಪಿಂದರ್ ಅಲಿಯಾಸ್ ಮಿದ್ದು ಎಂಬಾತನೇ ಈ ಕೃತ್ಯ ಎಸಗಿರುವುದು ದೃಢಪಟ್ಟಿತು.
ಇಂದು (ಡಿಸೆಂಬರ್ 17) ಮೊಹಾಲಿಯ ಹೊರವಲಯದ ತರ್ನ ತರಾನ್ ಪ್ರದೇಶದಲ್ಲಿ ಆರೋಪಿ ಹರ್ಪಿಂದರ್ ಅಡಗಿರುವ ಮಾಹಿತಿ ಪಡೆದ ಪೊಲೀಸರು ಅವನಿದ್ದ ಸ್ಥಳದ ಸುತ್ತಾ ಸುತ್ತುವರಿದರು. ಈ ವೇಳೆ ಶರಣಾಗುವಂತೆ ಸೂಚಿಸಿದರೂ ಕೇಳದ ಹರ್ಪಿಂದರ್, ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡುಹಾರಿಸಿದ್ದಾರೆ ಈ ದಾಳಿಯಲ್ಲಿ ಆರೋಪಿ ಹರ್ಪಿಂದರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮೃತಪಟ್ಟ ಹರ್ಪಿಂದರ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆದರೆ, ಒಬ್ಬ ಪ್ರಸಿದ್ಧ ಕಬಡ್ಡಿ ಆಟಗಾರ ಮತ್ತು ಆಯೋಜಕನಾಗಿದ್ದ ರಾಣಾ ಬಾಲಚೌರಿಯಾ ಅವರನ್ನು ಹತ್ಯೆ ಮಾಡಲು ನಿಖರ ಕಾರಣವೇನು ಎಂಬುದು ಇನ್ನು ನಿಗೂಢವಾಗಿದೆ. ಹಳೆಯ ವೈಷಮ್ಯ ಅಥವಾ ಬೆಟ್ಟಿಂಗ್ ದಂಧೆಯ ಕೈವಾಡವಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಣಾ ಅವರ ನಿಧನದಿಂದ ಪಂಜಾಬ್ ಕಬಡ್ಡಿ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಕೇವಲ ಎರಡೇ ದಿನದಲ್ಲಿ ಹಂತಕನ ಹತ್ಯೆ ಮಾಡುವ ಮೂಲಕ ಪೊಲೀಸರು ಅಪರಾಧಿಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.
