ಬೆಂಗಳೂರು: ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ತಾರೆ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಮೈಲಿಗಲ್ಲು ದಾಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 13,000 ರನ್‌ಗಳನ್ನು ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ರೂಟ್ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ರೂಟ್, ಟೆಸ್ಟ್ ಕ್ರಿಕೆಟ್‌ನ ರನ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ದಾಖಲೆಯನ್ನು ಈ ಹಿಂದೆ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 159 ಟೆಸ್ಟ್ ಪಂದ್ಯಗಳಲ್ಲಿ 13,000 ರನ್‌ಗಳನ್ನು ಕಲೆಹಾಕಿದ್ದರು. ಆದರೆ, ಜೋ ರೂಟ್ ಕೇವಲ 153 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಝಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರೂಟ್ 34 ರನ್‌ಗಳನ್ನು ಗಳಿಸಿದರು. ಈ 34 ರನ್‌ಗಳೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 13,000 ರನ್‌ಗಳ ಗಡಿಯನ್ನು ದಾಟಿದರು. ಈವರೆಗೆ 153 ಟೆಸ್ಟ್ ಪಂದ್ಯಗಳನ್ನಾಡಿರುವ ರೂಟ್, 279 ಇನಿಂಗ್ಸ್‌ಗಳಲ್ಲಿ 22,612 ಎಸೆತಗಳನ್ನು ಎದುರಿಸಿ, ಒಟ್ಟು 13,006 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಸಾಧನೆಯೊಂದಿಗೆ ರೂಟ್, ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತೀ ಕಡಿಮೆ ಪಂದ್ಯಗಳಲ್ಲಿ 13,000 ರನ್‌ಗಳ ಗಡಿಯನ್ನು ದಾಟಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.