ನವದೆಹಲಿ: ಭಾರತೀಯ ಶೂಟಿಂಗ್ ಕ್ರೀಡಾಂಗಣಕ್ಕೆ ದೊಡ್ಡ ಆಘಾತ ಸಂಭವಿಸಿದೆ. ದೇಶದ ಅಗ್ರ ಶೂಟರ್, ಖ್ಯಾತ ಕೋಚ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಜಸ್ಪಾಲ್ ರಾಣಾ (Jaspal Rana) (49) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಾಹಿತಿಯ ಪ್ರಕಾರ, ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ISSF ವಿಶ್ವಕಪ್‌ನಲ್ಲಿ ಭಾಗವಹಿಸಿದ ನಂತರ ಅವರು ಭಾರತಕ್ಕೆ ಮರಳುತ್ತಿದ್ದರು. ಈ ವೇಳೆ ಅವರಿಗೆ ಎದೆನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಇದನ್ನು ಸಾಮಾನ್ಯ ಆಸಿಡಿಟಿ ಎಂದು ಅವರು ನಿರ್ಲಕ್ಷ್ಯ ಮಾಡಿದ್ದರು ಎನ್ನಲಾಗಿದೆ. ಪ್ರಯಾಣ ಮುಂದುವರಿದ ಬಳಿಕ ನೋವು ಹೆಚ್ಚಾದ ಹಿನ್ನೆಲೆ ಅವರನ್ನು ತಕ್ಷಣ ನವದೆಹಲಿಯ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ವೇಳೆ ಹೃದಯದಲ್ಲಿ ಗಂಭೀರ ಬ್ಲಾಕೇಜ್ ಇರುವುದನ್ನು ಪತ್ತೆಹಚ್ಚಲಾಗಿತ್ತು. ತುರ್ತು ಚಿಕಿತ್ಸೆಯಾಗಿ ಸ್ಟೆಂಟ್ ಅಳವಡಿಸಲಾಗಿತ್ತು.ಇನ್ನು ಚಿಕಿತ್ಸೆ ಬಾಕಿ ಇರುವಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಅವರು ಕೊನೆಯುಸಿರೆಳೆದಿದ್ದಾರೆ.
ಮನು ಭಾಕರ್ ಸೇರಿದಂತೆ ಅನೇಕ ಚಾಂಪಿಯನ್‌ಗಳ ಗುರು
ಜಸ್ಪಾಲ್ ರಾಣಾ ಅವರು ಕೇವಲ ಮಾಜಿ ಶೂಟರ್ ಮಾತ್ರವಲ್ಲ, ಭಾರತದ ಅಗ್ರ ಮಟ್ಟದ ಕೋಚ್ ಆಗಿಯೂ ಗುರುತಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ಶೂಟರ್ ಮನು ಭಾಕರ್ ಅವರ ಯಶಸ್ಸಿನ ಹಿಂದೆ ಅವರ ಮಹತ್ವದ ಪಾತ್ರವಿತ್ತು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಗೆದ್ದ ಎರಡು ಕಂಚಿನ ಪದಕಗಳಿಗೆ ಅವರು ತರಬೇತಿ ನೀಡಿದ್ದರು.
ಅವರು ಸೌರಭ್ ಚೌಧರಿ, ಅನೀಶ್ ಭಾನ್ವಾಲಾ ಮತ್ತು ಚಿಂಕಿ ಯಾದವ್ ಸೇರಿದಂತೆ ಹಲವಾರು ಯುವ ಶೂಟರ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ್ದಾರೆ. 2020ರಲ್ಲಿ ಅವರ ಶೂಟಿಂಗ್ ಕ್ಷೇತ್ರದ ಕೊಡುಗೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2025ರ ಫೆಬ್ರವರಿಯಲ್ಲಿ ಅವರನ್ನು ಭಾರತೀಯ ಪಿಸ್ತೂಲ್ ಶೂಟಿಂಗ್ ಹೈ-ಪರ್ಫಾರ್ಮೆನ್ಸ್ ಕೋಚ್ ಆಗಿ ನೇಮಿಸಲಾಗಿತ್ತು.
ಕ್ರೀಡಾ ಸಾಧನೆಯ ಶಿಖರದಲ್ಲಿ ಜಸ್ಪಾಲ್ ರಾಣಾ
ಉತ್ತರಾಖಂಡದಲ್ಲಿ 1976ರ ಜೂನ್ 28ರಂದು ಜನಿಸಿದ ಜಸ್ಪಾಲ್ ರಾಣಾ, ತಮ್ಮ ಆಟದ ದಿನಗಳಲ್ಲಿ ಭಾರತದ ಅತ್ಯುತ್ತಮ ಪಿಸ್ತೂಲ್ ಶೂಟರ್‌ಗಳಲ್ಲಿ ಒಬ್ಬರಾಗಿದ್ದರು. 1994ರ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ವಿಭಾಗದಲ್ಲಿ ವಿಶ್ವ ದಾಖಲೆ ಸಹಿತ ಚಿನ್ನದ ಪದಕ ಗೆದ್ದು ಅವರು ಅಂತರರಾಷ್ಟ್ರೀಯ ಗಮನ ಸೆಳೆದಿದ್ದರು.
ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಅವರು ಭಾರತದ ಪರವಾಗಿ ಒಟ್ಟು 15 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಅದರಲ್ಲಿ 9 ಚಿನ್ನದ ಪದಕಗಳೂ ಸೇರಿವೆ. 2006ರ ದೋಹಾ ಏಷ್ಯನ್ ಗೇಮ್ಸ್‌ನಲ್ಲಿ ಅವರು 3 ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದರು.
ಕೇವಲ 18ನೇ ವಯಸ್ಸಿನಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ಹಾಗೂ 21ನೇ ವಯಸ್ಸಿನಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿತ್ತು. ಅವರ ಸಾಧನೆಗಳು ಭಾರತೀಯ ಶೂಟಿಂಗ್ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿವೆ.
ಜಸ್ಪಾಲ್ ರಾಣಾ ಅವರ ನಿಧನಕ್ಕೆ ದೇಶಾದ್ಯಂತ ಗಣ್ಯರು, ಕ್ರೀಡಾಪಟುಗಳು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂತಾಪ ವ್ಯಕ್ತಪಡಿಸಿ, ಜಸ್ಪಾಲ್ ರಾಣಾ ಅವರು ಶ್ರೇಷ್ಠ ಕ್ರೀಡಾಪಟು ಮಾತ್ರವಲ್ಲ, ಅತ್ಯಂತ ಸರಳ ಮತ್ತು ದಯಾಳು ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದ್ದಾರೆ.
