ವಿಶ್ವಚಾಂಪಿಯನ್‌ ಟೀಂ ಇಂಡಿಯಾಗೆ ವೈಟ್‌ವಾಶ್‌: ಐರ್ಲೆಂಡ್ ಐತಿಹಾಸಿಕ ಸಾಧನೆ

Untitled design 2026 06 28T233046.999

ಬೆಲ್ಫಾಸ್ಟ್:  ಟೀಂ ಇಂಡಿಯಾ ತನ್ನ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆದರೆ ‘ಕ್ರಿಕೆಟ್ ಶಿಶು’ ಎಂದೇ ಕರೆಯಲ್ಪಡುವ ಐರ್ಲೆಂಡ್ ತಂಡವು ಎರಡು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಸೃಷ್ಟಿಸಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಐರ್ಲೆಂಡ್ ಭಾರತವನ್ನು ಸರಣಿಯಲ್ಲಿ ಸೋಲಿಸಿದ ದಾಖಲೆಯಾಗಿದೆ.

ಮೊದಲ ಪಂದ್ಯದಲ್ಲೇ ದಾಖಲೆ

ಎರಡು ದಿನಗಳ ಹಿಂದೆ ಇದೇ ಬೆಲ್ಫಾಸ್ಟ್ ನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ತಂಡವು ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಸೋಲಿಸಿದೆ. ಅದಕ್ಕೂ ಮೊದಲು, ಐರಿಶ್ ತಂಡವು ಭಾರತ ವಿರುದ್ಧ ಸತತ 11 ಪಂದ್ಯಗಳಲ್ಲಿ ಸೋಲುಗಳನ್ನು ಅನುಭವಿಸಿತ್ತು. ಆದರೆ ಈ ಬಾರಿ ಐರ್ಲೆಂಡ್ ಬೇರೆಯದ್ದೇ ಕಥೆ ಬರೆಯಿತು. ಐರಿಶ್ ತಂಡವು ಎರಡು ಬಾರಿಯ ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತವನ್ನು ಸತತ ಪಂದ್ಯಗಳಲ್ಲಿ ಸೋಲಿಸಿ, 2-0 ಅಂತರದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಎರಡನೇ ಪಂದ್ಯದಲ್ಲಿ ರೋಚಕ ಕ್ಷಣಗಳು

ಎರಡನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಮತ್ತೊಂದು ಆಘಾತ ಕಾದಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಎಂಟನೇ ಓವರ್ ವೇಳೆಗೆ ಕೇವಲ 48 ರನ್ ಗಳಿಸಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಹ್ಯಾರಿ ಟೆಕ್ಟರ್ ಮತ್ತು ಬೆನ್ ಕ್ಯಾಲಿಟ್ಜ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಟೆಕ್ಟರ್ ಎಂಟು ಇನ್ನಿಂಗ್ಸ್ ಗಳಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಬಾರಿಸಿದರೆ ಜಾರ್ಜ್ ಡಾಕ್ರೆಲ್ ಕೂಡ ಅಲ್ಪ ಕಾಣಿಕೆ ನೀಡುವ ಮೂಲಕ ತಂಡವನ್ನು 154 ರನ್ಗಳಿಗೆ ಕೊಂಡೊಯ್ದರು. ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದ ಬೌಲರ್ ಪ್ರಿನ್ಸ್ ಯಾದವ್ ಮೂರು ವಿಕೆಟ್‌ಗಳನ್ನು ಪಡೆದರು.

ಭಾರತದ ಹೀನಾಯ ಆರಂಭ

154 ರರ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭ ಹೀನಾಯವಾಗಿತ್ತು. ಹಿಂದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಭಾರತೀಯ ಮೂಲದ ವೇಗಿ ಜೇ ಮುಂಧ್ರಾ, ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಮತ್ತು ಅದೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದರು. ಇಬ್ಬರಿಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ತಮ್ಮ ಮುಂದಿನ ಓವರ್‌ನಲ್ಲಿ, ಮುಂಧ್ರಾ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು. ಐದನೇ ಓವರ್‌ನಲ್ಲಿ ಇಶಾನ್ ಕಿಶನ್ ಕೂಡ ರನೌಟ್ ಆದರು. ಈ ಹೊತ್ತಿಗೆ, ಸ್ಕೋರ್ ಕೇವಲ 35 ರನ್‌ಗಳಾಗಿತ್ತು.

ರೋಚಕ ಅಂತ್ಯ

ನಂತರ ತಿಲಕ್ ವರ್ಮಾ (45) ಮತ್ತು ರಿಂಕು ಸಿಂಗ್ (42) ಅವರು ಧೈರ್ಯವಾಗಿ ಹೋರಾಡಿದರು. ಆದರೆ ಕೊನೆಯ ಓವರ್‌ನಲ್ಲಿ ಭಾರತಕ್ಕೆ ಗೆಲ್ಲಲು 7 ರನ್‌ಗಳ ಅಗತ್ಯವಿತ್ತು. ಆದರೆ ಐರ್ಲೆಂಡ್ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಭಾರತವನ್ನು 153 ರನ್‌ಗಳಿಗೆ ಆಲೌಟ್ ಮಾಡಿದರು. ಹೀಗಾಗಿ ಭಾರತವು ಕೇವಲ 1 ರನ್ ಅಂತರದಲ್ಲಿ ಸೋಲನ್ನು ಅನುಭವಿಸಿತು.

ಐತಿಹಾಸಿಕ ದಾಖಲೆಗಳು

ಈ ಸರಣಿ ಸೋಲಿನೊಂದಿಗೆ ಭಾರತವು 1,050 ದಿನಗಳ ನಂತರ ದ್ವಿಪಕ್ಷೀಯ ಟಿ20 ಸರಣಿಯನ್ನು ಸೋತಿದೆ. ಭಾರತದ ಕೊನೆಯ ಬಾರಿಗೆ 2023 ರ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಸೋತಿತ್ತು. ಆದರೆ ಅದೇ ವರ್ಷ, ಐರ್ಲೆಂಡ್ ಪ್ರವಾಸ ಮಾಡಿದ್ದ ಭಾರತ ತಂಡ ಸರಣಿಯನ್ನು 2-0 ಅಂತರದಿಂದ ಗೆಲ್ಲುವ ಮೂಲಕ ತನ್ನ ಗೆಲುವಿನ ಹಾದಿಯನ್ನು ಪ್ರಾರಂಭಿಸಿತು. ಮುಂದಿನ ಮೂರು ವರ್ಷಗಳಲ್ಲಿ, ಟೀಂ ಇಂಡಿಯಾ ಸತತ 16 ಸರಣಿಗಳು ಮತ್ತು ಪಂದ್ಯಾವಳಿಗಳಲ್ಲಿ ಅಜೇಯವಾಗಿ ಉಳಿದಿತ್ತು. ಕಾಕತಾಳೀಯವಾಗಿ, ಈ ಪ್ರಯಾಣವು ಐರ್ಲೆಂಡ್‌ನಲ್ಲಿ ಕೊನೆಗೊಂಡಿದೆ.

ಶ್ರೇಯಸ್-ಗಂಭೀರ್ ಜೋಡಿಗೆ ಆಘಾತ

ಭಾರತ ಟಿ20 ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಜೋಡಿಗೆ ಈ ಸರಣಿ ಸೋಲು ಜೀವನಪರ್ಯಂತ ನೆನಪಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮ ಮೊದಲ ಸರಣಿಯಲ್ಲೇ ಇಂತಹ ಅವಮಾನಕರ ಸೋಲನ್ನು ಎದುರಿಸಿರುವುದು ಇಬ್ಬರಿಗೂ ದೊಡ್ಡ ಪಾಠವಾಗಿದೆ.

ಜೇ ಮುಂಧ್ರಾ ಮ್ಯಾಜಿಕ್

ಐರ್ಲೆಂಡ್ ಜಯದಲ್ಲಿ ಭಾರತೀಯ ಮೂಲದ ವೇಗಿ ಜೇ ಮುಂಧ್ರಾ ಪ್ರಮುಖ ಪಾತ್ರ ವಹಿಸಿದರು. ಅವರು ತಮ್ಮ ಅದ್ಭುತ ಬೌಲಿಂಗ್‌ನಲ್ಲಿ ಭಾರತದ ಪ್ರಮುಖ ಬ್ಯಾಟರ್‌ಗಳನ್ನು ವಿಕೆಟ್ ಒಪ್ಪಿಸುವಂತೆ ಮಾಡಿದರು. ಇದು ಅವರ ವೃತ್ತಿಜೀವನದ ಮರೆಯಲಾಗದ ಪಂದ್ಯವಾಗಿದೆ.

Exit mobile version