ಮಾರ್ಚ್ 10ಕ್ಕೆ IPL 2027 ಆರಂಭ: ಮೇ 15ಕ್ಕೆ ಫೈನಲ್!

Untitled design (45)

ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2027)ನ 20ನೇ ಸೀಸನ್‌ಗೆ ಬಿಸಿಸಿಐ ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ. ಹೊಸ ಯೋಜನೆಯ ಪ್ರಕಾರ, ಐಪಿಎಲ್ 2027 ಟೂರ್ನಿ ಮಾರ್ಚ್ 10 ರಿಂದ ಆರಂಭವಾಗಲಿದೆ. ಅಂತೆಯೇ ಮೇ 15 ರೊಳಗೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಐಪಿಎಲ್ ಟೂರ್ನಿ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಿ ಮೇ ಅಂತ್ಯದವರೆಗೆ ನಡೆಯುತ್ತಿತ್ತು. ಆದರೆ ಹವಾಮಾನ ಬದಲಾವಣೆ, ಆಟಗಾರರ ಫಿಟ್‌ನೆಸ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಬಾರಿ ಆರಂಭದ ದಿನಾಂಕವನ್ನು ಮುಂಚಿತಗೊಳಿಸಲು ಚಿಂತನೆ ನಡೆಸಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಪ್ರಕಾರ, 2027ರ ಐಪಿಎಲ್ ಕೂಡ ಪ್ರಸ್ತುತ 74 ಪಂದ್ಯಗಳ ಮಾದರಿಯಲ್ಲೇ ಮುಂದುವರಿಯಲಿದೆ. ಅಂದರೆ 70 ಲೀಗ್ ಪಂದ್ಯಗಳು ಹಾಗೂ 4 ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಪಂದ್ಯಗಳ ಸಂಖ್ಯೆಯನ್ನು 94ಕ್ಕೆ ಹೆಚ್ಚಿಸುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

74 ಪಂದ್ಯಗಳಿಗೆ ಮಿತಿ ಯಾಕೆ?

ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸದಿರುವುದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ. ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳು ತಮ್ಮ ದ್ವಿಪಕ್ಷೀಯ ಸರಣಿಗಳನ್ನು ಮೊದಲೇ ನಿಗದಿಪಡಿಸಿರುವುದರಿಂದ ವಿದೇಶಿ ಆಟಗಾರರು ದೀರ್ಘಾವಧಿಗೆ ಲಭ್ಯರಾಗುವುದು ಕಷ್ಟವಾಗುತ್ತಿದೆ. ಪಂದ್ಯಗಳ ಸಂಖ್ಯೆ ಹೆಚ್ಚಾದರೆ ಆಟಗಾರರ ಮೇಲಿನ ದೈಹಿಕ ಒತ್ತಡವೂ ಹೆಚ್ಚಾಗುವ ಸಾಧ್ಯತೆಯಿದೆ.

ಎರಡು ವಾರ ಮುಂಚಿತವಾಗಿ ಪಂದ್ಯ ಆರಂಭಕ್ಕೆ ಕಾರಣವೇನು?

ಮೇ ತಿಂಗಳ ಅಂತ್ಯದ ವೇಳೆಗೆ ಭಾರತದ ಹಲವು ಭಾಗಗಳಲ್ಲಿ ತೀವ್ರ ಬಿಸಿಲು ಮತ್ತು ಪೂರ್ವ ಮುಂಗಾರು ಮಳೆಯ ಸಮಸ್ಯೆ ಎದುರಾಗುತ್ತದೆ. ಇದರಿಂದ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳಿಗೆ ಅಡ್ಡಿಯಾಗುವ ಸಾಧ್ಯತೆ ಇರುತ್ತದೆ. ಇನ್ನು ಪಂದ್ಯ ವೀಕ್ಷಕರಿಗೂ ಮೈದಾನಕ್ಕೆ ಬರಲು ತೊಂದರೆ ಉಂಟಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡ ಬಿಸಿಸಿಐ ಮಾರ್ಚ್ 10ರಿಂದಲೇ ಟೂರ್ನಿ ಆರಂಭಿಸಿ ಮೇ 15ರೊಳಗೆ ಮುಗಿಸುವ ಯೋಜನೆ ರೂಪಿಸಲಾಗುತ್ತಿದೆ.

ಹೊಸ ವೇಳಾಪಟ್ಟಿಯಿಂದ ಆಟಗಾರರು ಮತ್ತು ಅಭಿಮಾನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಿಸಿಲಿನ ತೀವ್ರತೆ ಕಡಿಮೆ ಇರುವ ಸಮಯದಲ್ಲಿ ಪಂದ್ಯಗಳು ನಡೆಯುವುದರಿಂದ ಮೈದಾನದಲ್ಲಿನ ಪರಿಸ್ಥಿತಿ ಉತ್ತಮವಾಗಲಿದೆ.

ದೇಶೀಯ ಕ್ರಿಕೆಟ್ ವೇಳಾಪಟ್ಟಿಯಲ್ಲೂ ಬದಲಾವಣೆ

ಐಪಿಎಲ್ ಅನ್ನು ಮಾರ್ಚ್ 10 ರಂದೇ ಆರಂಭಿಸಬೇಕಿರುವುದರಿಂದ ಭಾರತದ ದೇಶಿ ಕ್ರಿಕೆಟ್ ವೇಳಾಪಟ್ಟಿಯನ್ನೂ ಸಂಪೂರ್ಣವಾಗಿ ಬದಲಾಯಿಸಲು ಬಿಸಿಸಿಐ ನಿರ್ಧರಿಸಿದೆ. ರಣಜಿ ಟ್ರೋಫಿ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ದೇಶಿ ಟೂರ್ನಿಗಳನ್ನು ಮಾರ್ಚ್ ಆರಂಭದ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. 

ಒಟ್ಟಿನಲ್ಲಿ, ಐಪಿಎಲ್ 2027ರ ಹೊಸ ವಿಂಡೋ ಮೂಲಕ ಬಿಸಿಸಿಐ ವಾಣಿಜ್ಯ ಯಶಸ್ಸಿನ ಜೊತೆಗೆ ಆಟಗಾರರ ಆರೋಗ್ಯ, ಹವಾಮಾನ ಪರಿಸ್ಥಿತಿ ಮತ್ತು ಜಾಗತಿಕ ಕ್ರಿಕೆಟ್ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿರುವುದು ಈ ನಿರ್ಧಾರದಿಂದ ಸ್ಪಷ್ಟವಾಗಿದೆ.

Exit mobile version