RCB vs CSK: ಹೈ-ವೋಲ್ಟೇಜ್ ಪಂದ್ಯಕ್ಕೆ ಕೌಂಟ್ ಡೌನ್: ಧೋನಿ ಸೇರಿ 6 ಸ್ಟಾರ್ ಆಟಗಾರರು ಪಂದ್ಯದಿಂದ ಔಟ್!

Untitled design (43)

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ 2026ರ 11ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ನಡುವಿನ ಈ ಕಾದಾಟವು ಕೇವಲ ಪಂದ್ಯವಲ್ಲ, ಅದೊಂದು ಭಾವನೆ. ಆದರೆ, ಈ ಬಾರಿಯ ಪಂದ್ಯಕ್ಕೂ ಮುನ್ನಾ ಅಭಿಮಾನಿಗಳಿಗೆ ನಿರಾಸೆ ಮೂಡಿದೆ. ಗಾಯದ ಸಮಸ್ಯೆ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಎರಡೂ ತಂಡಗಳ ಒಟ್ಟು 6 ಪ್ರಮುಖ ಆಟಗಾರರು ಈ  ಪಂದ್ಯದಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಪಾಲಿನ ಅಚ್ಚುಮೆಚ್ಚಿನ ಆಟಗಾರ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ವರದಿಗಳ ಪ್ರಕಾರ, ಧೋನಿ ಸ್ನಾಯು ಸೆಳೆತದ (Calf Strain) ಸಮಸ್ಯೆಯಿಂದ ಬಳಲುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ಪಡೆಯಲಿದ್ದಾರೆ. ಧೋನಿ ಇಲ್ಲದ ಸಿಎಸ್‌ಕೆ ಮೈದಾನಕ್ಕಿಳಿಯುವುದು ಅಭಿಮಾನಿಗಳಿಗೆ ದೊಡ್ಡ ಆಘಾತವೇ ಸರಿ.

ಸಿಎಸ್‌ಕೆ ತಂಡದ ಮತ್ತೊಬ್ಬ ಆಟಗಾರ, ಆಸ್ಟ್ರೇಲಿಯಾದ ಆಲ್‌ರೌಂಡರ್ ಮ್ಯಾಥ್ಯೂ ಶಾರ್ಟ್ ಹೆಬ್ಬೆರಳು ಮುರಿದಿದ್ದು, ಅವರೂ ಸಹ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಸೈಡ್ ಸ್ಟ್ರೈನ್ ಸಮಸ್ಯೆಯಿಂದಾಗಿ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.

ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕೂಡ ಆಟಗಾರರ ಅಲಭ್ಯತೆ ತಲೆನೋವಾಗಿ ಪರಿಣಮಿಸಿದೆ. ಆಸೀಸ್ ವೇಗಿ ಜೋಶ್ ಹೇಝಲ್‌ವುಡ್ ಕಾಲಿನ ನೋವಿನಿಂದ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ. ಶನಿವಾರ ನಡೆದ ಅಭ್ಯಾಸ ಅವಧಿಯಲ್ಲೂ ಅವರು ಬೌಲಿಂಗ್ ಮಾಡದ ಕಾರಣ, ಸಿಎಸ್‌ಕೆ ವಿರುದ್ಧ ಅವರು ಆಡುವುದು ಅನುಮಾನ.

ಇನ್ನು ವೇಗಿ ಯಶ್ ದಯಾಳ್ ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯ ಸಂಪೂರ್ಣ ಐಪಿಎಲ್ ಆವೃತ್ತಿಯಿಂದಲೇ ಹೊರಗುಳಿದಿದ್ದಾರೆ. ಇದು ಬೆಂಗಳೂರು ತಂಡದ ದೇಶೀಯ ಬೌಲಿಂಗ್ ವಿಭಾಗಕ್ಕೆ ದೊಡ್ಡ ನಷ್ಟವಾಗಿದೆ. ಇವರ ಜೊತೆಗೆ ಶ್ರೀಲಂಕಾದ ವೇಗಿ ನುವಾನ್ ತುಷಾರ ಕೂಡ ತಂಡವನ್ನು ಕೂಡಿಕೊಂಡಿಲ್ಲ. ಫಿಟ್‌ನೆಸ್ ಸಮಸ್ಯೆಯ ಕಾರಣ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅವರಿಗೆ ಎನ್‌ಒಸಿ (NOC) ನೀಡದ ಕಾರಣ ಅವರು ಅಲಭ್ಯರಾಗಲಿದ್ದಾರೆ.

ಸ್ಟಾರ್ ಆಟಗಾರರ ಅಲಭ್ಯತೆಯ ನಡುವೆಯೂ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯವು ರೋಚಕತೆಯನ್ನು ಕಳೆದುಕೊಳ್ಳುವುದಿಲ್ಲ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

Exit mobile version