ಬೆಂಗಳೂರು: ಐಪಿಎಲ್ 2025ರ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈಗ ಹೊಸ ಮಾಲೀಕರ ಪಾಲಾಗುವ ಮೂಲಕ ಜಾಗತಿಕ ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸಿದೆ. ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾ ಫ್ರಾಂಚೈಸಿಗಳ ಪೈಕಿ ಒಂದಾಗಿರುವ ಆರ್‌ಸಿಬಿಯನ್ನು ಬರೋಬ್ಬರಿ 1.78 ಬಿಲಿಯನ್ ಡಾಲರ್ (ಸುಮಾರು ₹16,600 ಕೋಟಿ) ಮೊತ್ತಕ್ಕೆ ಬೃಹತ್ ಹೂಡಿಕೆದಾರರ ಒಕ್ಕೂಟವೊಂದು ಖರೀದಿಸಿದೆ. ಈ ಬೃಹತ್ ಒಪ್ಪಂದವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಆರ್‌ಸಿಬಿಯನ್ನು ಪಾತ್ರವಾಗಿಸಿದೆ.
ಯಾರು ಈ ಹೊಸ ಮಾಲೀಕರು ?
ಪ್ರಸ್ತುತ ಮಾಲೀಕರಾದ ಡಿಯಾಜಿಯೊ (ಯುನೈಟೆಡ್ ಸ್ಪಿರಿಟ್ಸ್) ಸಂಸ್ಥೆಯಿಂದ ತಂಡದ ಮಾಲೀಕತ್ವವನ್ನು ಪ್ರಮುಖ ಹೂಡಿಕೆದಾರರ ಒಕ್ಕೂಟವೊಂದು ವಶಪಡಿಸಿಕೊಂಡಿದೆ. ಈ ಒಕ್ಕೂಟದಲ್ಲಿ ಭಾರತದ ದೈತ್ಯ ಸಂಸ್ಥೆಗಳಾದ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಪ್ರಸಿದ್ಧ ಖಾಸಗಿ ಇಕ್ವಿಟಿ ಸಂಸ್ಥೆಯಾದ ಬ್ಲ್ಯಾಕ್‌ಸ್ಟೋನ್ (Blackstone) ಜಂಟಿಯಾಗಿ ಬಂಡವಾಳ ಹೂಡಿವೆ. ಹೊಸ ಮಾಲೀಕತ್ವದ ಅಡಿಯಲ್ಲಿ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ತಂಡದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
🚨 RCB HAS BEEN SOLD TO BIRLAS. 🚨
– A consortium of Aditya Birla Group, American sports investor David Blitzer, US private equity firm Blackstone has acquired RCB. (Money Control). pic.twitter.com/O8xTvQW3ML
— Mufaddal Vohra (@mufaddal_vohra) March 24, 2026
ಮಹಿಳಾ ತಂಡವೂ (WPL) ಇವರ ತೆಕ್ಕೆಗೆ
ಈ ಒಪ್ಪಂದವು ಕೇವಲ ಪುರುಷರ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಆರ್‌ಸಿಬಿಯ ಮಹಿಳಾ ತಂಡವನ್ನೂ (WPL) ಇದೇ ಒಕ್ಕೂಟವು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಲಿಷ್ಠವಾಗಿರುವ ಆರ್‌ಸಿಬಿ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಈ ಹೊಸ ಮಾಲೀಕರ ಗುರಿಯಾಗಿದೆ.
ಕುಮಾರ್ ಮಂಗಲಂ ಬಿರ್ಲಾ ಅವರ ಮಾತು
ಈ ಐತಿಹಾಸಿಕ ಒಪ್ಪಂದದ ಕುರಿತು ಮಾತನಾಡಿದ ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ, ಆಧುನಿಕ ಕ್ರೀಡೆಯಲ್ಲಿ ಅತ್ಯಂತ ಪ್ರಭಾವಶಾಲಿ ಫ್ರಾಂಚೈಸಿಗಳಲ್ಲಿ ಒಂದಾದ ಆರ್‌ಸಿಬಿ, ನಮ್ಮ ಸಂಸ್ಥೆಯ ಪರಂಪರೆಯನ್ನು ಜಾಗತಿಕ ಕ್ರೀಡಾ ಕ್ಷೇತ್ರಕ್ಕೆ ವಿಸ್ತರಿಸಲು ಒಂದು ವಿಶಿಷ್ಟ ವೇದಿಕೆಯನ್ನು ನೀಡುತ್ತದೆ. ಈ ಅಸಾಧಾರಣ ಆಸ್ತಿಯ ಪಾಲಕರಾಗಲು ನಾವು ಹೆಮ್ಮೆಪಡುತ್ತೇವೆ ಮತ್ತು ಈ ಪರಂಪರೆಯನ್ನು ಮತ್ತಷ್ಟು ಬಲಿಷ್ಠವಾಗಿ ನಿರ್ಮಿಸಲು ಬದ್ಧರಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಡೀಲ್ ಯಾವಾಗ ಜಾರಿಗೆ ಬರಲಿದೆ ?
ಐಪಿಎಲ್ 2026ರ ಸೀಸನ್ ಮುಗಿಯುವವರೆಗೂ ಪ್ರಸ್ತುತ ಮಾಲೀಕರಾದ ಡಿಯಾಜಿಯೊ ಸಂಸ್ಥೆಯೇ ತಂಡದ ಜವಾಬ್ದಾರಿಯನ್ನು ಮುಂದುವರಿಸಲಿದೆ. 2026ರ ಐಪಿಎಲ್ ಮುಗಿದ ನಂತರ ಈ ಹೊಸ ಮಾಲೀಕತ್ವವು ಅಧಿಕೃತವಾಗಿ ಜಾರಿಗೆ ಬರಲಿದ್ದು, 2027ರಿಂದ ಆರ್‌ಸಿಬಿ ಹೊಸ ಯುಗಕ್ಕೆ ಕಾಲಿಡಲಿದೆ.
