ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನಾಡಲು ಗ್ರೀನ್ ಸಿಗ್ನಲ್ ಕೊಟ್ಟ RCB ಫ್ರಾಂಚೈಸಿ

Untitled design 2026 01 22T212721.804

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 26ರಿಂದ ಹೊಸ ಸೀಸನ್‌ಗೆ ಅಧಿಕೃತ ಚಾಲನೆ ದೊರೆಯಲಿದ್ದು, ಕ್ರಿಕೆಟ್ ಅಭಿಮಾನಿಗಳ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ಪಂದ್ಯಗಳು ಎಲ್ಲಿ ನಡೆಯಲಿವೆ ಎಂಬ ಪ್ರಶ್ನೆಗೆ ಕೊನೆಗೂ ಸ್ಪಷ್ಟ ಉತ್ತರ ಸಿಕ್ಕಿದೆ. ಬೆಂಗಳೂರು ನಗರದ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ RCB ತನ್ನ ಹೋಮ್ ಮ್ಯಾಚ್‌ಗಳನ್ನು ಆಡಲು ಒಪ್ಪಿಗೆ ಸೂಚಿಸಿದೆ.

ಈ ನಿರ್ಧಾರದಿಂದ RCB ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ‘ಕಿಂಗ್’ ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರ ಬ್ಯಾಟಿಂಗ್‌ ಪ್ರದರ್ಶನವನ್ನು ಮತ್ತೆ ಚಿನ್ನಸ್ವಾಮಿ ಮೈದಾನದಲ್ಲಿ ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿರುವುದರಿಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ನಿರ್ಧಾರಕ್ಕೆ ಕೆಲವು ಷರತ್ತುಗಳೂ ಜೋಡಿಸಲಾಗಿದ್ದು, ಮುಖ್ಯವಾಗಿ ಪ್ರೇಕ್ಷಕರ ಸುರಕ್ಷತೆ ಮತ್ತು ಮೈದಾನದ ಮೂಲಸೌಕರ್ಯ ದುರಸ್ತಿ ಕುರಿತಂತೆ RCB ಫ್ರಾಂಚೈಸಿ ಗಂಭೀರ ಗಮನ ಹರಿಸಿದೆ.

KSCA ಮನವಿ, ಸರ್ಕಾರದ ಅನುಮತಿ

ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪತ್ರಿಕಾಗೋಷ್ಠಿ ನಡೆಸಿ, ಚಿನ್ನಸ್ವಾಮಿ ಕ್ರೀಡಾಂಗಣದ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಪಂದ್ಯಗಳ ಆಯೋಜನೆಗೆ ಮೈದಾನ ಸಜ್ಜಾಗಿದೆ ಎಂದು ಘೋಷಿಸಿತ್ತು. ಇದರೊಂದಿಗೆ ರಾಜ್ಯ ಸರ್ಕಾರವೂ IPL ಹಾಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ನಡೆಸಲು ಅಧಿಕೃತ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ KSCA, RCB ಮ್ಯಾನೇಜ್‌ಮೆಂಟ್‌ಗೆ ಬೆಂಗಳೂರಿನಲ್ಲೇ ಹೋಮ್ ಮ್ಯಾಚ್‌ಗಳನ್ನು ಆಡಿಸುವಂತೆ ಮನವಿ ಮಾಡಿತ್ತು.

KSCA ಅಧಿಕಾರಿಗಳ ಪ್ರಕಾರ, ಬೆಂಗಳೂರು ಕ್ರಿಕೆಟ್ ಅಭಿಮಾನಿಗಳ ಭಾವನೆಗೆ ಗೌರವ ನೀಡುವ ದೃಷ್ಟಿಯಿಂದ ಈ ನಿರ್ಧಾರ ಅತ್ಯಂತ ಮಹತ್ವದ್ದಾಗಿದೆ. “ಬೆಂಗಳೂರು ಮತ್ತೆ IPL ಉತ್ಸವಕ್ಕೆ ವೇದಿಕೆಯಾಗಬೇಕು ಎಂಬುದು ನಮ್ಮ ಆಶಯ. ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ನೇರ ಪಂದ್ಯ ವೀಕ್ಷಣೆಯ ಅನುಭವ ಸಿಗಬೇಕು,” ಎಂದು KSCA ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

RCB ಫ್ರಾಂಚೈಸಿಯ ಸ್ಪಷ್ಟನೆ

ಈ ಬೆಳವಣಿಗೆಗಳ ಬೆನ್ನಲ್ಲೇ RCB ಆಡಳಿತ ಮಂಡಳಿ ಅಧಿಕೃತ ಹೇಳಿಕೆ ನೀಡಿದ್ದು, “ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇವೆ. ನಮ್ಮ ಅಭಿಮಾನಿಗಳ ನಡುವೆ ಪಂದ್ಯಗಳನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಆದರೆ, ಪ್ರೇಕ್ಷಕರ ಭದ್ರತೆ ಹಾಗೂ ಮೂಲಸೌಕರ್ಯ ಸಂಬಂಧಿತ ಕೆಲವು ಸಮಸ್ಯೆಗಳನ್ನು ಇನ್ನೂ ಪರಿಹರಿಸಬೇಕಿದೆ,” ಎಂದು ತಿಳಿಸಿದೆ.

ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವುದು, ಪ್ರವೇಶ ದ್ವಾರಗಳು, ಆಸನ ವ್ಯವಸ್ಥೆ, ತುರ್ತು ನಿರ್ಗಮನ ದಾರಿ, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳಲ್ಲಿ ಸುಧಾರಣೆ ಅಗತ್ಯವಿದೆ ಎಂದು RCB ಹೇಳಿದೆ. “RCB ಪಾಲಿಗೆ ಅಭಿಮಾನಿಗಳೇ ಹೃದಯ. ಅವರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಖಚಿತಪಡಿಸಿದ ಬಳಿಕವೇ ಪಂದ್ಯ ಆಯೋಜನೆ ನಡೆಸಲಾಗುತ್ತದೆ,” ಎಂದು ಫ್ರಾಂಚೈಸಿ ತಿಳಿಸಿದೆ.

ವೆಂಕಟೇಶ್ ಪ್ರಸಾದ್ ಹೇಳಿಕೆ

ಇನ್ನು KSCA ಅಧಿಕಾರಿಯಾಗಿರುವ ವೆಂಕಟೇಶ್ ಪ್ರಸಾದ್ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಬೆಂಗಳೂರಿನಲ್ಲಿ IPL ಪಂದ್ಯಗಳನ್ನು ಆಯೋಜಿಸಲು ನಾವು ಸಂಪೂರ್ಣ ಸಿದ್ಧರಾಗಿದ್ದೇವೆ. ಆದರೆ, RCB ಮ್ಯಾನೇಜ್‌ಮೆಂಟ್ ಇನ್ನೂ ಕೆಲ ಅಂಶಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ನಾವು ಸಲಹೆ ನೀಡಿದ್ದೇವೆ. ಚಿನ್ನಸ್ವಾಮಿಯಲ್ಲಿ RCB ಪಂದ್ಯಗಳು ನಡೆಯಬೇಕು ಎಂಬುದು ನಮ್ಮ ಬಲವಾದ ಆಶಯ,” ಎಂದಿದ್ದರು.

Exit mobile version