ಕಾಲ್ತುಳಿತ ಪ್ರಕರಣ: ಕಪ್ ಗೆದ್ದರೂ ಆರ್‌ಸಿಬಿ ಬ್ಯಾನ್ ಆಗುತ್ತಾ?

2026ಕ್ಕೆ ಆರ್‌ಸಿಬಿ ಬ್ಯಾನ್ ಆಗುತ್ತಾ: ಬಿಸಿಸಿಐ ಮುಂದಿನ ನಡೆಯೇನು?

Befunky collage 2025 06 09t114924.277

ಬೆಂಗಳೂರು: ಐಪಿಎಲ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಚೊಚ್ಚಲ ಟ್ರೋಫಿಯನ್ನು ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ರೋಚಕ ಜಯದೊಂದಿಗೆ ಗೆದ್ದುಕೊಂಡಿತು. ಆದರೆ, ಈ ಭರ್ಜರಿ ಗೆಲುವಿನ ಸಂಭ್ರಮದ ನಡುವೆ ನಡೆದ ದಾರುಣ ಕಾಲ್ತುಳಿತ ಘಟನೆಯಿಂದಾಗಿ ಆರ್‌ಸಿಬಿ ಐಪಿಎಲ್ 2026ರಿಂದ ನಿಷೇಧಕ್ಕೊಳಗಾಗುವ ಸಾಧ್ಯತೆಯ ಬಗ್ಗೆ ಚರ್ಚೆ ಶುರುವಾಗಿದೆ.

ಜೂನ್ 4ರಂದು ಬೆಂಗಳೂರಿನ ವಿಧಾನಸೌಧ ಮತ್ತು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವ ಆಯೋಜಿಸಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಉಂಟಾದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದರು, ಜೊತೆಗೆ ಹಲವರು ಗಾಯಗೊಂಡಿದ್ದರು. ಈ ಘಟನೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಂಭೀರವಾಗಿ ಪರಿಗಣಿಸಿದ್ದು, ಆರ್‌ಸಿಬಿ ತಂಡದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ಇಂತಹ ದುರಂತ ಘಟನೆಗಳ ವೇಳೆ ಬಿಸಿಸಿಐ ಮೂಕಪ್ರೇಕ್ಷಕರಾಗಿರುವುದಿಲ್ಲ. ಭವಿಷ್ಯದಲ್ಲಿ ಇಂತಹ ಆಚರಣೆಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು,” ಎಂದು ಹೇಳಿದ್ದಾರೆ. ಆರ್‌ಸಿಬಿ ಖಾಸಗಿಯಾಗಿ ಈ ವಿಜಯೋತ್ಸವ ಆಯೋಜಿಸಿದ್ದರೂ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಬಿಸಿಸಿಐ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತನಿಖೆಯ ಹೊಣೆ ಸಿಐಡಿಗೆ, ಒನ್ ಮ್ಯಾನ್ ಕಮಿಷನ್ ರಚನೆ:

ಕಾಲ್ತುಳಿತ ದುರಂತದ ತನಿಖೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮೈಕಲ್ ಕುನ್ಹಾ ನೇತೃತ್ವದಲ್ಲಿ ‘ಒನ್ ಮ್ಯಾನ್ ಕಮಿಷನ್’ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಆರ್‌ಸಿಬಿ, ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್‌ಎ, ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವಹಿಸಲಾಗಿದೆ.

ಆರ್‌ಸಿಬಿ ಮೇಲೆ ನಿಷೇಧದ ಭೀತಿ:

ಸಿಐಡಿ ತನಿಖೆಯ ವರದಿಯಲ್ಲಿ ಆರ್‌ಸಿಬಿ ಫ್ರಾಂಚೈಸಿ ಈ ದುರಂತಕ್ಕೆ ನೇರ ಕಾರಣವೆಂದು ಕಂಡುಬಂದರೆ, ಬಿಸಿಸಿಐ ಒಂದು ವರ್ಷದ ನಿಷೇಧವನ್ನು ಹೇರಬಹುದು ಎಂದು ತಿಳಿದುಬಂದಿದೆ. ಈ ಘಟನೆ ಐಪಿಎಲ್‌ನ ಬ್ರ್ಯಾಂಡ್ ಮೌಲ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಬಿಸಿಸಿಐ ತಕ್ಷಕ್ಷಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ. ಈ ಘಟನೆಯಿಂದ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮ ಕೂಡ ಮಂಕಾಗಿದೆ.

Exit mobile version