ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಲೀಗ್ ಹಂತದ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಪಂಜಾಬ್ ಕಿಂಗ್ಸ್ 23 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಮೇ 17ರಂದು ಧರಂಶಾಲಾದಲ್ಲಿ ನಡೆದ ಈ ಪಂದ್ಯದೊಂದಿಗೆ ಪಂಜಾಬ್ ತಂಡದ ಪ್ಲೇಆಫ್ ಭರವಸೆ ಬಹುತೇಕ ಕೊನೆಗೊಂಡಿದೆ.
ಪಂದ್ಯದ ಹೈಲೈಟ್ಸ್
ಮೊದಲು ಬ್ಯಾಟಿಂಗ್ ಮಾಡಿದ RCB ತಂಡ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಐಯ್ಯರ್ ಹಾಗೂ ಟಿಮ್ ಡೇವಿಡ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿತು. ಬಳಿಕ 223 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಮಾತ್ರ ಗಳಿಸಿತು.
ಟೂರ್ನಿಯ ಆರಂಭದಲ್ಲಿ ಸತತ ಆರು ಗೆಲುವು ದಾಖಲಿಸಿದ್ದ ಪಂಜಾಬ್ ಕಿಂಗ್ಸ್ ಈಗ ಸತತ ಆರು ಸೋಲುಗಳನ್ನು ಕಂಡಿದೆ. ಈ ಸೋಲಿನಿಂದಾಗಿ ಪಂಜಾಬ್ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಕನಸು ಬಹುತೇಕ ಕೈಚೆಲ್ಲಿಕೊಂಡಿದೆ. 13 ಅಂಕಗಳನ್ನು ಹೊಂದಿದ್ದ ಪಂಜಾಬ್ ಈ ಪಂದ್ಯ ಗೆದ್ದಿದ್ದರೆ 15 ಅಂಕಗಳನ್ನು ಮುಟ್ಟಿ ಪ್ಲೇಆಫ್ ಭರವಸೆಯನ್ನು ಉಳಿಸಿಕೊಳ್ಳಬಹುದಿತ್ತು.
ವೈರಲ್ ಫೋಟೋ
ಪಂದ್ಯದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೊ ವೈರಲ್ ಆಗಿದೆ. ಅದರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಜಿಂಟಾ ಅವರು ನಾಯಕ ಶ್ರೇಯಸ್ ಐಯ್ಯರ್‌ಗೆ ಕೈ ತೋರಿಸುತ್ತಾ ಹಿಗ್ಗಾಮುಗ್ಗಾ ಬೈದಾಡುತ್ತಿರುವಂತೆ ಕಾಣಿಸುತ್ತದೆ. ಈ ಫೋಟೊವನ್ನು ನೋಡಿ ಅನೇಕ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಕೆಲವರು ಇದನ್ನು ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲಕ ಸಂಜೀವ್ ಗೋಯೆಂಕಾ ನಾಯಕ ಕೆಎಲ್ ರಾಹುಲ್ ಜೊತೆ ವಾದ ಮಾಡಿದ್ದ ಘಟನೆಗೆ ಹೋಲಿಸಿದ್ದಾರೆ.
— Faruk (@uf2151593) May 17, 2026
ಆದರೆ ಈ ಫೋಟೊ ಸಂಪೂರ್ಣವಾಗಿ ನಕಲಿ ಮತ್ತು ಎಐ ತಂತ್ರಜ್ಞಾನದ ಮೂಲಕ ತಯಾರಿಸಲಾಗಿದೆ. ನಿನ್ನೆ ಧರಂಶಾಲಾ ಮೈದಾನದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಪ್ರೀತಿ ಜಿಂಟಾ ಮತ್ತು ಶ್ರೇಯಸ್ ಐಯ್ಯರ್ ನಡುವೆ ಸಾಮಾನ್ಯ ಸಂಭಾಷಣೆ ಮಾತ್ರ ನಡೆದಿದೆ. ಅಸಲಿ ಫೋಟೊದಲ್ಲಿ ಪ್ರೀತಿ ಜಿಂಟಾ ಶಾಂತವಾಗಿ, ಸಮಾಧಾನದಿಂದ ಶ್ರೇಯಸ್ ಜೊತೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಪ್ರಚಾರ
ಬೇಕಂತಲೇ ಹೆಚ್ಚು ಜನರನ್ನು ತಲುಪಲು ಮತ್ತು ಹೆಚ್ಚು ವೀಕ್ಷಣೆ ಪಡೆಯಲು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಈ ರೀತಿಯ ಎಡಿಟೆಡ್ ಫೋಟೊಗಳನ್ನು ಹರಡುತ್ತಿವೆ. ಅಭಿಮಾನಿಗಳು ಯಾವುದೇ ಸುದ್ದಿಯನ್ನು ನಂಬುವ ಮೊದಲು ಅದರ ಸತ್ಯಾಂಶವನ್ನು ಪರಿಶೀಲಿಸುವುದು ಬಹಳ ಮುಖ್ಯ.
